ತುಮಕೂರು


ರಾಜ್ಯದಲ್ಲಿ ಎಲ್ಲ ವಾಣಿಜ್ಯ ವಾಹನಗಳು, ಲಾರಿ ಸೇರಿದಂತೆ ಎಲ್ಲ ಸಾರಿಗೆ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟೇಪ್ ಅಳವಡಿಸುವಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ, ಈ ಟೇಪ್‍ಗಳ ಅಳವಡಿಕೆಗೆ ಇನ್ನು 10 ದಿನಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಫೆಡರೇಷನ್ ಕರ್ನಾಟಕ ಲಾರಿ ಮಾಲೀಕರ ಸಂಘ, ಗೂಡ್ಸ್ ವಾಹನ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಅಸೋಸಿಯೇಷನ್ ವತಿಯಿಂದ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕೋರಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಫೆಡರೇಷನ್ ಕರ್ನಾಟಕ ಲಾರಿ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಲವು ದಿನಗಳಿಂದ ವಾಣಿಜ್ಯ ವಾಹನ, ಲಾರಿಗಳು ಸೇರಿದಂತೆ ಎಲ್ಲ ಸಾರಿಗೆ ವಾಹನಗಳಿಗೆ ರಿಪ್ಲೆಕ್ಟ್ ಟೇಪ್ ಅಂಟಿಸುವಂತೆ ಸರ್ಕಾರ ಆದೇಶ ಮಾಡಿದೆ. ವಾಹನಗಳಿಗೆ ಈ ಟೇಪ್ ಅಂಟಿಸಲು 12 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈ ಟೇಪ್ ಬೆಲೆ ತುಂಬಾ ದುಬಾರಿಯಾಗಿರುವ ಕಾರಣ ಇನ್ನು ವಾಹನಗಳಿಗೆ ಅಳವಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇನ್ನು 10 ದಿನಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಈ ಟೇಪ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಬೆಲೆಯೂ ದುಬಾರಿಯಾಗಿದೆ. ಈ ಟೇಪ್‍ಗೆ 5 ವರ್ಷ ವಾರಂಟಿ ಎಂದು ಹೇಳುತ್ತಾರೆ. ಆದರೆ ಇದು 5 ವರ್ಷಗಳ ಕಾಲ ಬಾಳಿಕೆ ಬರುವುದಿಲ್ಲ. ಹಾಗಾಗಿ ಸರ್ಕಾರ 10 ದಿನಗಳ ಕಾಲಾವಕಾಶ ನೀಡಿದರೆ ಈ ಆದೇಶಕ್ಕೆ ನ್ಯಾಯಾಲಯದಿಂದ ತಡೆ ತರಲು ಸಹ ಪ್ರಯತ್ನಿಸಲಾಗುವುದು ಎಂದರು.
ವಾಹನಗಳಿಗೆ ಈ ರಿಪ್ಲೆಕ್ಟ್ ಟೇಪ್ ಅಳವಡಿಸುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಬೆಲೆ ದುಬಾರಿಯಾಗಿರುವುದರಿಂದ ಸದ್ಯಕ್ಕೆ ಕಷ್ಟ ಸಾಧ್ಯವಾಗುತ್ತಿದ್ದು, ಗುಣಮಟ್ಟದ ಟೇಪ್‍ನ್ನು ಕಡಿಮೆ ಬೆಲೆಗೆ ನೀಡಿದರೆ ಖರೀದಿಸಿ ಅಳವಡಿಸಬಹುದಾಗಿದೆ. ಆದ್ದರಿಂದ ನಮಗೆ ಇನ್ನು 10 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಆರ್‍ಟಿಓ ಹೇಳಿಕೆ
ಮನವಿ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರು, ಸರ್ಕಾರ ವಾಹನಗಳಿಗೆ ರಿಪ್ವೆಕ್ಟ್ ಟೇಪ್ ಅಳವಡಿಸುವಂತೆ ಆದೇಶ ಮಾಡಿದೆ. ಆದರೆ ಈ ಟೇಪ್ ಅಳವಡಿಕೆ ಸಂಬಂಧ ಲಾರಿ, ಗೂಡ್ಸ್ ವಾಹನ ಅಸೋಸಿಯೇಷನ್, ಟ್ಯಾಕ್ಸಿ, ಆಟೋ ಅಸೋಸಿಯೇಷನ್‍ನವರು ಇನ್ನು ಕೆಲ ದಿನಗಳು ಕಾಲಾವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಮೇಲಾಧಿಕಾರಿಗಳೊಂದಿಗೂ ಚರ್ಚೆ ನಡೆಸಿದ್ದು, ಅವರು ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದ್ದು, ಕಾನೂನು ಪ್ರಕಾರ ಟೇಪ್ ಅಳವಡಿಸಲೇಬೇಕಾಗಿದೆ ಎಂದು ತಿಳಿಸಿದ್ದಾರೆ. ಮೇಲಾಧಿಕಾರಿಗಳು ಮಾತನ್ನು ಸಹ ವಾಹನಗಳ ಅಸೋಸಿಯೇಷನ್‍ವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

(Visited 1 times, 1 visits today)