ತುಮಕೂರು


ಅತ್ಯಂತ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಸರ್ಕಾರದ ವಿವಿಧ ಮಂತ್ರಿಗಳ ನಡುವೆ ಗೊಂದಲದ ಹೇಳಿಕೆಗಳು ಸದನದ ಚರ್ಚೆಯ ವೇಳೆ ವ್ಯಕ್ತವಾಗಿದ್ದು, ಸರ್ಕಾರದ ಈ ನಡೆಗೆ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಲಕ್ಷ್ಮಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಬಿಜಾಪುರ ಕ್ಷೇತ್ರದ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪಂಚಮಶಾಲಿ ಲಿಂಗಾಯಿತ ಸಮುದಾಯವನ್ನು ಪ್ರವರ್ಗ 1 ಕ್ಕೆ ಮತ್ತು ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಂಬಂಧ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳಿದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರ ನೀಡಿದ್ದಾರೆ ಎಂದರು.
ಇದೇ ವಿಚಾರವಾಗಿ ಶಾಸಕರಾದ ಕೌಜಲಗಿ ಮಹಾಂತೇಶ್ ಶಿವಾನಂದ ಸದನದಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸಪೂಜಾರಿ ಅವರು, ಮಡಿವಾಳ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರಿಸುವ ಸಂಬಂಧ ಕುಲಶಾಸ್ತ್ರಿಯ ಅಧ್ಯಯನ ನಡೆದು, ಸದನಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ಯಾವುದೇ ತೀರ್ಮಾನವನ್ನು ಇದುವರೆಗೂ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ನೀಡಿರುವುದು ಖಂಡನಾರ್ಹ ಎಂದರು.
ಈ ಎರಡು ಉತ್ತರಗಳನ್ನು ನೋಡಿದಾಗ, ಸರ್ಕಾರದ ನಡೆ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಿದೆ. ಶತ ಶತಮಾನಗಳಿಂದ ಮೈಲಿಗೆ ಬಟ್ಟೆಗಳನ್ನು ಶುಚಿ ಮಾಡುತ್ತಾ, ಅತ್ಯಂತ ತುಚ್ಚ ಭಾವನೆಯಿಂದ ಬದುಕುತ್ತಿರುವ ಮಡಿವಾಳ ಸಮಾಜಕ್ಕೆ ಸಚಿವರ ಈ ಹೇಳಿಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ ಕೂಡಲೇ ಸರ್ಕಾರ ತಾನೇ ಒಪ್ಪಿಕೊಂಡಿರುವಂತೆ ಸಲ್ಲಿಕೆಯಾಗಿರುವ ಮಡಿವಾಳ ಸಮಾಜದ ಕುಲಶಾಸ್ತ್ರಿಯ ಅಧ್ಯಯನ ವರದಿ (ಡಾ.ಅನ್ನಪೂರ್ಣಮ್ಮ) ಯನ್ನು ಕುಲಂಕುಷವಾಗಿ ಚರ್ಚಿಸಿ, ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಂಪನರಸಯ್ಯ, ಬಿ. ವೆಂಕಟರಾಮಯ್ಯ, ಹೆಚ್. ದೇವೇಂದ್ರ, ಎಂ.ಎ. ಆನಂದಮೂರ್ತಿ, ಹೆಚ್.ಬಿ. ಜ್ಞಾನೇಶ್, ಶ್ರೀರಾಮ್, ಚಿಕ್ಕಣ್ಣ, ಮಂಜುನಾಥ್, ಧರ್ಮಕುಮಾರ್, ಟಿ.ಜಿ. ವೆಂಕಟೇಶ್, ಟಿ.ಎಸ್. ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)