ತುಮಕೂರು


ಭಾರತೀಯ ಪರಂಪರೆಯಲ್ಲಿ ಸಮಾಜಕ್ಕೆ ಸಕಾರಾತ್ಮಕ ತಿರುವು ಕೊಟ್ಟಂತಹ ವಿಭೂತಿ ಪುರುಷರಲ್ಲಿ ಮಹಾಯೋಗಿ ವೇಮನ ಕೂಡ ಒಬ್ಬರು. ಅವರು ತಮ್ಮ ವಚನಗಳಲ್ಲಿ ಹೇಳುವಂತೆ ವಿದ್ಯೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ನಗರದ ಶ್ರೀ ರಾಮಕೃಷ್ಣ ವಿವೇಕಾಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿ ಅಭಿಪ್ರಾಯ ಪಟ್ಟರು.
ನಗರದ ಕನ್ನಡ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ರೆಡ್ಡಿ ಜನಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ವೇಮನರು ಸಾಮಾನ್ಯನಂತೆ ಸಂಚರಿಸಿ ಆಧ್ಯಾತ್ಮ ಅರಿವಿನಿಂದ ಮಹಾಯೋಗಿಯಾದರು. ಅವರು ಸಮಾಜವನ್ನು ಮಾನವೀಯ ದೃಷ್ಟಿಯಲ್ಲಿ ನೋಡುತ್ತಿದ್ದರು. ಅವರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ತುಮಕೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ವೇಮನ ಅವರು ತಮ್ಮ ವಚನಗಳ ಮೂಲಕ ಬಾಹ್ಯ ಪೂಜೆ ಬದಲಾಗಿ ಆಂತರಿಕ ಭಕ್ತಿಭಾವ ಹೊಂದಿರಬೇಕು. ಅವರ ವಚನಗಳಲ್ಲಿರುವ ತತ್ವಾದರ್ಶಗಳನ್ನು ನಾವೆಲ್ಲರೂ ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಭಾಷೆ, ಕಲೆ, ಸಾಹಿತ್ಯ, ಆಚಾರ-ವಿಚಾರಗಳಲ್ಲಿ ನಾವು ಸ್ವಂತಿಕೆಯನ್ನು ಕಳೆದು ಕೊಳ್ಳುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ವೃದ್ಧಾಶ್ರಮ, ಅನಾಥಶ್ರಮ, ಭ್ರಷ್ಟಾಚಾರ, ಮಹಿಳಾ ಶೋಷಣೆ, ಜಾತಿ ಭೂತದಂತಹ ಸಾಮಾಜಿಕ ಪಿಡುಗುಗಳು ಹೆಚ್ಚಾಗಿ ಸಮಾಜದಲ್ಲಿ ಮೌಲ್ಯಗಳೇ ಇಲ್ಲಾದಂತಾಗಿವೆ ಎಂದರಲ್ಲದೇ ಎಲ್ಲಾ ಭಾಷೆಯಲ್ಲೂ ಶರಣರು ತಮ್ಮ ವಚನ ಚಳುವಳಿಯಿಂದ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಮನುಕುಲದ ಒಳಿತಿಗಾಗಿ ಶರಣರು ರಚಿಸಿರುವ ವಚನಸಾಹಿತ್ಯವನ್ನು ಅರಿತು ಸಾರ್ಥಕ ಬದುಕನ್ನು ಕಾಣಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಜಿಲ್ಲಾ ರೆಡ್ಡಿ ಜನಸಂಘ ಅಧ್ಯಕ್ಷ ಕೆ.ಶ್ರೀನಿವಾಸ ರೆಡ್ಡಿ, ತಾಲ್ಲೂಕು ತಹಶೀಲ್ದಾರ್ ಸಿದ್ದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿ ಕುಮಾರ್ ಮತ್ತು ರೆಡ್ಡಿ ಜನಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)