ಗುಬ್ಬಿ :

      ವೀಕ್ ಕ್ಯಾಂಡಿಡೇಟ್ ಹಾಕಿದ್ದೆ ಗುಬ್ಬಿಯಲ್ಲಿ ಶ್ರೀನಿವಾಸ್ ಸತತವಾಗಿ ಗೆಲುವು ಸಾಧಿಸಲು ಕಾರಣವಾಯಿತು ಎಂದು ಸಂಸದ ಹಾಗೂ ದಿಶಾ ಉಪಸಮಿತಿ ಅಧ್ಯಕ್ಷ ಜಿ.ಎಸ್.ಬಸವರಾಜು ಅಚ್ಚರಿಯ ಮಾತುಗಳನ್ನಾಡಿದರು.

      ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ದಿಶಾ ಉಪಸಮಿತಿ ಪ್ರಗತಿ ಪರಿಶೀಲನೆ ಸಭೆ ಹಾಗೂ ಸಂಸದ ಆದರ್ಶ ಗ್ರಾಮ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈಚೆಗೆ ಗುಬ್ಬಿ ಶಾಸಕರು ನೀಡಿರುವ ಟೀಕಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಕಿಡಿಕಾರುತ್ತಲೇ ಗುಬ್ಬಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಆಗಿಲ್ಲ. ಅಸಮರ್ಥರನ್ನು ಆಯ್ಕೆ ಮಾಡುತ್ತೀರಿ. ಶ್ರೀನಿವಾಸ್ ಶಾಸಕನಾಗುವಂತಿಲ್ಲ. ಆತನ ವಿರುದ್ದ ವೀಕ್ ಕ್ಯಾಂಡಿಡೇಟ್ ಹಾಕಿ ತಪ್ಪಾಯ್ತು ಎಂದು ಬೆಟ್ಟಸ್ವಾಮಿ ಅವರನ್ನು ಅಸಮರ್ಥ ಎಂದು ಪರೋಕ್ಷವಾಗಿ ಹೇಳಿ ಸಭಿಕರಲ್ಲಿ ಅಚ್ಚರಿ ತಂದರು.

      ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನನ್ನ ಮೇಲೆ ಟೀಕೆ ಮಾಡಿರುವ ಗುಬ್ಬಿ ಶಾಸಕರು ಅಭಿವೃದ್ದಿ ವಿಚಾರದಲ್ಲಿ ಶ್ವೇತಪತ್ರ ಹೊರಡಿಸಲಿ. ನಾನು ಕೂಡಾ ನನ್ನ ಕೊಡುಗೆಯನ್ನು ಶ್ವೇತಪತ್ರ ಸಿದ್ದಗೊಳಿಸುತ್ತೇನೆ ಎಂದು ಸವಾಲೆಸೆದ ಸಂಸದರು ಗುಬ್ಬಿ ಕ್ಷೇತ್ರದಲ್ಲಿ ನಡೆದ ಅಭಿವೃದ್ದಿ ಕೆಲಸವನ್ನೆಲ್ಲಾ ನನ್ನದು ಎಂದು ಹೇಳಿಕೊಂಡು ಓಡಾಡುತ್ತಾರೆ. ನೀರಾವರಿ ವಿಚಾರದಲ್ಲಿ ಕಿಂಚಿತ್ತೂ ಕಾಳಜಿ ತೋರದ ಶಾಸಕರು ಬರೀ ಸುಳ್ಳು ಭರವಸೆ ನೀಡುತ್ತಾ ನನ್ನನ್ನು ಟೀಕೆ ಮಾಡುವುದೇ ಕೆಲಸ ಮಾಡಿಕೊಂಡಿದ್ದಾರೆ. ನಾನು ಎಂದೂ ತಾರತಮ್ಯ ನೀತಿ ಅನುಸರಿಸಿಲ್ಲ. ಅಭಿವೃದ್ದಿ ಕೆಲಸ ಹಂಚಿಕೆ ವಿಚಾರದಲ್ಲೂ ಅರ್ಹರಿಗೆ ತಲುಪಿಸಿದ್ದೇನೆ ಎಂದ ಅವರು ಸಂಸದ ಆದರ್ಶ ಗ್ರಾಮವನ್ನು ನನ್ನ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಗುಬ್ಬಿಯ ಮಾರಶೆಟ್ಟಿಹಳ್ಳಿ ಪಂಚಾಯಿತಿಯ ಜತೆಗೆ ಎಚ್‍ಎಎಲ್ ಘಟಕ ಸುತ್ತುವರಿದ 5 ಗ್ರಾಮ ಪಂಚಾಯಿತಿಗಳ 18 ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಭಿವೃದ್ದಿ ಕೆಲಸ ಮಾಡಲಾಗುವುದು ಎಂದರು.

      ದಿಶಾ ಸಮಿತಿ ಮೂಲಕ ಎಲ್ಲಾ ಇಲಾಖೆಯ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಲು ಸಜ್ಜಾಗಿದ್ದು, ಮುಂದಿನ ವರ್ಷದಲ್ಲಿ ದಿಶಾ ಸಮಿತಿಯ 142 ಅಂಶಗಳನ್ನು ಸಾರ್ಥಕಗೊಳಿಸಿ ಜಾರಿ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪ್ರತಿ ಮನೆಗೆ ತಲುಪಿಸುವ ಮೋದಿ ಅವರ ಕನಸು ನನಸು ಮಾಡಲು ಕ್ರಮವಹಿಸಲಾಗಿದೆ. ಸ್ಥಳೀಯವಾಗಿ ಅಧಿಕಾರಿಗಳು ವಾಸ್ತವ್ಯ ಹೂಡುವ ಜತೆಗೆ ಪ್ರಾಮಾಣಿಕ ಕರ್ತವ್ಯ ನಡೆಸಲು ದಿಶಾ ಮಾರ್ಗದರ್ಶನ ನೀಡಲಿದೆ. ವೆಬ್‍ಸೈಟ್‍ನಲ್ಲಿ ಎಲ್ಲಾ ಇಲಾಖೆಯ ಮಾಹಿತಿ, ಅಂಕಿಅಂಶವನ್ನು ನಮೂದಿಸಬೇಕು. ಪ್ರಗತಿಯ ವರದಿ ಸಹ ನೀಡಬೇಕು. ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಧಿಕಾರಿಗಳ ವಿರುದ್ದ ಕ್ರಮವಹಿಸಲು ದಿಶಾ ಸಮಿತಿ ಶಿಫಾರಸ್ಸು ಮಾಡಲಿದೆ ಎಂದ ಅವರು ಎತ್ತಿನಹೊಳೆ ನೀರಾವರಿ ಯೋಜನೆಗೆ ಪೂಕರವಾಗಿ ಕುಮಾರಧಾರೆ ನೀರನ್ನು ಮಳೆಗಾಲದಲ್ಲಿ ಈ ಭಾಗಕ್ಕೆ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿಕೊಂಡಲ್ಲಿ 8 ಸಾವಿರ ಕೆರೆಗಳಿಗೆ ನೀರು ಹರಿಸಿಕೊಳ್ಳಬಹುದು ಎಂದರು.

      ದಿಶಾ ಉಪಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ 321 ಗ್ರಾಮ ಪಂಚಾಯಿತಿ ಸೇರಿದಂತೆ 11 ನಗರಸಂಸ್ಥೆಗಳು ದಿಶಾ ಸಮಿತಿಯ ವ್ಯಾಪ್ತಿಗೆ ಬರಲಿದೆ. ಯಾವುದೇ ಸಮಸ್ಯೆಗಳನ್ನು 30 ದಿನದಲ್ಲಿ ಕ್ರಮವಹಿಸಬೇಕು. ಸಮಸ್ಯೆ ಜತೆಗೆ ಹೊಸ ಯೋಜನೆಗಳು, ಸಲಹೆಗಳನ್ನು ದಿಶಾ ಸಮಿತಿಗೆ ಸಾರ್ವಜನಿಕರು ತಿಳಿಸಬಹುದಾಗಿದೆ. ಸಂಸದ ಆದರ್ಶ ಗ್ರಾಮ ಯೋಜನೆಯಲ್ಲಿ ಸಂಸದರ ನಿಧಿ ಜತೆಗೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಸಾಕಾರಗೊಳಿಸಲು ಸೂಚಿಸಲಾಗಿದೆ.

      ಮೊದಲ ಆದ್ಯತೆಯಲ್ಲಿ ಅನುದಾನಗಳು ದೊರೆಯಲಿದೆ. ಮುಂದಿನ 5 ವರ್ಷದಲ್ಲಿ 8 ಗ್ರಾಮ ಪಂಚಾಯಿತಿ ಬಹುತೇಕ ಅಭಿವೃದ್ದಿ ಕಾಣಲು ಈ ಯೋಜನೆ ಸಹಕಾರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಮಮತಾ, ತಾಪಂ ಇಒ ನರಸಿಂಹಯ್ಯ ಮಾರಶೆಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷೆ ಲತಾ ಗುರುಸಿದ್ದಯ್ಯ, ನಿಟ್ಟೂರು ಗ್ರಾಪಂ ಅಧ್ಯಕ್ಷೆ ಜಯಮ್ಮ ಇತರರು ಇದ್ದರು.

(Visited 40 times, 1 visits today)