ತುಮಕೂರು


ಸೋಲು ಅವಮಾನವಲ್ಲ. ಸೋಲಿನಿಂದಲೇ ಗೆಲುವಿನ ಸೋಪಾನ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ವಿದ್ಯಾರ್ಥಿಗಳಿರಲಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿರಲಿ, ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಖಂಡಿತ ಮುಂದೆ ಯಶಸ್ಸು ಸಿಗಲಿದೆ ಎಂದು ಶ್ರೀ ಸಿದ್ಧಾರ್ಥ ಮಹಾ ವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರು, ಖ್ಯಾತ ಮನೋವೈದ್ಯರಾದ ಡಾ.ಎಂ.ಟಿ.ಸತ್ಯನಾರಾಯಣ ವಿಶ್ಲೇಷಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ, ತುಮಕೂರು ನಗರ ಸಾಂತ್ವನ ಕೇಂದ್ರ, ವಾಸವಿ ವಿದ್ಯಾಪೀಠ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಐ.ಟಿ. ಬಡಾವಣೆಯಲ್ಲಿರುವ ವಾಸವಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮನೋವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಮಸ್ಯೆಗಳು ಎಲ್ಲರಿಗೂ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಆಗರವೇ ತುಂಬಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಇಂತಹ ವಿಷಯಗಳತ್ತ ಗಮನ ಹರಿಸಬಾರದು. ಓದು ಮುಗಿಯುವ ತನಕ ಬೇರೆ ಚಟುವಟಿಕೆಗಳತ್ತ ಓಗೂಡಬಾರದು. ಒಂದು ವೇಳೆ ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದರೂ ಸಹ ಅದೇ ಅಂತಿಮವಲ್ಲ. ಬದುಕಿನಲ್ಲಿ ಸಾಧಿಸುವುದು ಬಹಳಷ್ಟಿದೆ. ಹೋರಾಟದ ಮನೋಭಾವ ಮುಖ್ಯವಾಗಬೇಕು. ಎಲ್ಲದನ್ನೂ ಇಷ್ಟಪಟ್ಟು ಸ್ವೀಕರಿಸಿದರೆ ಕಷ್ಟವಾಗಲಾರದು ಎಂದವರು ಸಲಹೆ ನೀಡಿದರು.
ಪ್ರತಿಯೊಂದು ಸಮಸ್ಯೆಗೂ ಒಂದೊಂದು ಪರಿಹಾರ ಇದ್ದೇ ಇರುತ್ತದೆ. ಒಂದು ಬೀಗಕ್ಕೆ ಕೀ ಹೇಗೆ ಮುಖ್ಯವೋ ಹಾಗೆಯೇ ಸಮಸ್ಯೆಗಳಿಗೂ ಪರಿಹಾರಗಳು ಇರುತ್ತವೆ. ಅದನ್ನು ಹುಡುಕಿಕೊಳ್ಳುವ ಮನಸ್ಸು ಇರಬೇಕು. ಕೆಲವು ಸಮಸ್ಯೆಗಳಿಗೆ ಚಿಕಿತ್ಸೆಯ ಅಗತ್ಯ ಇರುತ್ತದೆ. ಹದಿಹರೆಯದವರಲ್ಲಿ ಪ್ರೇಮ ವೈಫಲ್ಯ ಹೆಚ್ಚುತ್ತಿದ್ದು, ಇಂತಹವರು ಮದ್ಯ ಮತ್ತು ಮಾದಕ ವಸ್ತುಗಳತ್ತ ಗಮನ ಹರಿಸುತ್ತಿದ್ದಾರೆ. ಇದು ಮತ್ತಷ್ಟು ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ಇದಕ್ಕೆ ಬದಲಾಗಿ ಆತ್ಮವಿಶ್ವಾಸ ಮೂಡಿಸಿಕೊಂಡು ಬದುಕಿನ ದಾರಿ ಕಂಡುಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತ ಮಾತನಾಡಿ ಮನಸ್ಸು ಯಾವತ್ತೂ ಕ್ರಿಯಾತ್ಮಕ ಚಟುವಟಿಕೆಗಳಿಂದ ಕೂಡಿರಬೇಕು. ಮಾನಸಿಕ ಸದೃಢತೆ ಇದ್ದರೆ ಶಾರೀರಿಕವಾಗಿಯೂ ಸದೃಢತೆ ಹೊಂದುತ್ತೇವೆ. ಆದರೆ ಕೆಲವರು ಸೋಲಿನಿಂದ ದೃತಿಗೆಡುತ್ತಾರೆ. ಮಾನಸಿಕವಾಗಿ ದುರ್ಬಲ ಮನಸ್ಸಿಗೆ ಅವಕಾಶ ಕೊಟ್ಟಾಗ ಮನಸ್ಸು ಘಾಸಿಗೆ ಒಳಗಾಗುತ್ತದೆ. ಇದೆಲ್ಲದರಿಂದ ಹೊರಬರಬೇಕಾದರೆ ಮಾನಸಿಕವಾಗಿ ಧೈರ್ಯ ತಂದುಕೊಳ್ಳುವ ಅಗತ್ಯತೆ ಇದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ ಬಹಳಷ್ಟು ಮಂದಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಹೊರಬರುವ ದಾರಿಗಳಿದ್ದರೂ ಅತ್ತ ಮನಸ್ಸು ಮಾಡುತ್ತಿಲ್ಲ. ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಒಂದೊಂದು ಸಮಸ್ಯೆಗಳು ಕಾಡುತ್ತವೆ. ವರದಕ್ಷಿಣೆ ವಿರೋಧಿ ವೇದಿಕೆಯು ಇಂತಹ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದು ವಿವರಿಸಿದರು.
ತುಮಕೂರು ನಗರ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಸಂರಕ್ಷಣಾಧಿಕಾರಿ ಕಲ್ಪನ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಮಾನಸಿಕ ಸದೃಢತೆಗೆ ಯೋಗ, ಧ್ಯಾನದಂತಹ ಸಕ್ರಿಯ ಚಟುವಟಿಕೆಗಳಿಗೆ ಗಮನ ಹರಿಸಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಹೆಚ್.ವಿ.ಚಂದ್ರಶೇಖರ ಆರಾಧ್ಯ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸಮಾರಂಭದಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮತ್ತಿತರರು ಮಾತನಾಡಿದರು. ಪದಾಧಿಕಾರಿಗಳಾದ ಲಲಿತ ಮಲ್ಲಪ್ಪ, ಗೀತಾ ನಾಗೇಶ್, ನರೇಂದ್ರಬಾಬು ಮತ್ತಿತರರಿದ್ದರು. ಸಾಂತ್ವನ ಕೇಂದ್ರದ ಪಾರ್ವತಮ್ಮ, ಗಂಗಲಕ್ಷ್ಮಿ, ರಾಧ ಅವರ ತಂಡ ಅರಿವಿನ ಗೀತೆಗಳನ್ನು ಹಾಡಿದರು. ವರ್ಷ ಮತ್ತು ಹಿಮರಶ್ಮಿ ಪ್ರಾರ್ಥಿಸಿದರು. ಜೀವಶಾಸ್ತ್ರ ಉಪನ್ಯಾಸಕ ಬೆಂಕಿ ವಸಂತಕುಮಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ವಿನೋದ್ ವಂದಿಸಿದರು. ಗಣಿತ ಶಿಕ್ಷಕ ಜಿ.ಹನುಮಂತಯ್ಯ ನಿರೂಪಿಸಿದರು.

(Visited 2 times, 1 visits today)