ತುಮಕೂರು


ರಾಜ್ಯ ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ
ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಮುಂದುವರೆದಿದ್ದರೆ ಅದಕ್ಕೆ ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯಿತ ಮಠ ಮಾನ್ಯಗಳ ಕೊಡುಗೆ ಆಪಾರವಾಗಿದೆ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ನಗರದ ಎಸ್.ಐ.ಟಿ.ಯ ಬಿರ್ಲಾ ಸಭಾಂಗಣದಲ್ಲಿಂದು ವೀರಶೈವ, ಲಿಂಗಾಯಿತ ಸೇವಾ ಸಮಿತಿವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ವೀರಶೈವ ಮತ್ತು ಲಿಂಗಾಯಿತ ಸಮಾಜದ ಇತಿಹಾಸ ಮತ್ತು ಪರಂಪರೆ ಬಹಳ ದೊಡ್ಡದಾಗಿದೆ.ವೀರಕ್ತ ಮತ್ತು ರಾಜಾಶ್ರಯದ ಮಠಗಳು,ಜಾತಿ, ಧಮದ ಭೇಧ ಮಾಡದೆ ಎಲ್ಲಾ ಮಕ್ಕಳಿಗೂ ಊಟ, ವಸತಿಯೊಂದಿಗೆ ಶಿಕ್ಷಣ ನೀಡುವ ಮೂಲಕ ಪ್ರಪಂಚ ಮೂಲೆ ಮೂಲೆಗಳಲ್ಲಿಯೂ ಭಾರತೀಯರು ದೊರೆಯುವಂತೆ ಮಾಡಿದ್ದಾರೆ ಎಂದರು.
ನಮ್ಮ ಸಮಾಜದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ.ಆದರೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆದರೆ ಹೆಚ್ಚಿನದನ್ನು ಸಾಧಿಸಬಹುದು ಎಂದರು.
21ನೇ ಶತಮಾನ ಭಾರತೀಯರ ಯುಗ. ಏಕೆಂದರೆ ದೇಶದಲ್ಲಿ ಅತ್ಯಂತ ಸಶಕ್ತ ಯುವಜನತೆ ಇದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಕಾರ್ಯಕ್ರಮಗಳು ಆಗಬೇಕಿದೆ. ಪ್ರತಿಭೆಯ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಂಡು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ, ನಿಮಗೆ ವಿದ್ಯೆ ಕಲಿಸಿದ ಗುರುಗಳು, ಜನ್ಮ ನೀಡಿದ ತಂದೆ ತಾಯಿಗಳು ಹಾಗೂ ಅಶ್ರಯ ನೀಡಿದ ಮಠ, ಮಾನ್ಯಗಳಿಗೂ ಕೀರ್ತಿ ತಂದಂತಾಗುತ್ತದೆ.ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಸದೃಢತೆಯನ್ನು ನಿವೆಲ್ಲರೂ ಹೊಂದುವ ಅಗತ್ಯವಿದೆ. ಈ ವರ್ಷದಲ್ಲಿಯೇ ವೀರಶೈವ ಮಹಾಸಭಾವತಿಯಿಂದ ಸುಮಾರು 1.20 ಕೋಟಿ ರೂಗಳನ್ನು ಖರ್ಚು ಮಾಡಿ, ಇಡೀ ರಾಜ್ಯದ ವೀರಶೈವ, ಲಿಂಗಾಯಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಘೋಷಿಸಿದರು.
ಎನ್.ಎ.ಎಲ್.ನ ವಿಜ್ಞಾನಿ ಡಾ.ಸಿ.ಎಂ.ಮಂಜುನಾಥ್ ಮಾತನಾಡಿ, ಪ್ರತಿಭಾಪುರಸ್ಕಾರವೆಂಬುದು ಇನ್ನೊಬ್ಬರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಮಾಡುವ ಗೌರವ. 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂಬ ನೀತಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಎಂಬುದು ಆರಂಭವಷ್ಟೇ, ನಿಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ.ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ವೀರಶೈವ ಸಮಾಜದ ಎಂದಿಗೂ ಭೇಧ,ಭಾವ ಮಾಡಿದ ಸಮಾಜವಲ್ಲ. ಹಾಗಾಗಿ ಯುವಜನರು ಸಹ ಎಲ್ಲರನ್ನು ಒಳಗೊಳ್ಳುವ ಕೆಲಸವನ್ನು ಮಾಡಬೇಕು. ಗುಂಪುಗಾರಿಕೆಯಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ. ಪ್ರತಿಭಾವಂತರು ಉದ್ಯೋಗ ಹುಡುಕದೆ, ತಾವೇ ನಾಲ್ವರಿಗೆ ಉದ್ಯೋಗ ನೀಡುವಂತಹ ಉದ್ದಿಮೆದಾರರಾಗಿ ಬೆಳೆಯಬೇಕೆಂದು ಸಲಹೆ ನೀಡಿದರು.
ವಿಟಿಯು ಸಿಂಡಿಕೇಟ್ ಸದಸ್ಯ ಡಾ.ಡಿ.ಎಸ್.ಸುರೇಶಕುಮಾರ್, ಬುದ್ದಿವಂತಿಕೆಯ ಜೊತೆಗೆ, ಸಾಮಾಜಿಕ ಜ್ಞಾನವೂ ಕೂಡ ನಿಮ್ಮ ಜೀವನವನ್ನು ಸುಂದರವಾಗಿ ರೂಪಿಸಬಲ್ಲದು, ಸ್ವಯಂ ಶಿಸ್ತಿನ ಜೊತೆಗೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ, ಪರಿಶ್ರಮ, ಆತ್ಮವಿಶ್ವಾಸ ನಿಮ್ಮನ್ನು ಮೇಲ್ಮುಖವಾಗಿ ತೆಗೆದುಕೊಂಡು ಹೋಗಲಿದೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗೆಯ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ, ಯುವಜನರು ಸೇರಿ ವೀರಶೈವ ಲಿಂಗಾಯಿತ ಸೇವಾ ಸಮಿತಿಯನ್ನು ರಚಿಸಿಕೊಂಡು, ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಸಂತೋಷದ ಕೆಲಸ, ಪ್ರಯತ್ನ, ಪರಿಶ್ರಮ, ವಿಶ್ವಾಸ ಈ ಮೂರು ಅಂಶಗಳು ನಿಮ್ಮನ್ನು ರೂಪಿಸಬಲ್ಲವು.ಶಿಕ್ಷಣದ ಗುರಿ ಸರ್ಟಿಪಿಕೇಟ್ ಅಲ್ಲ, ಚಾರಿತ್ರ ನಿರ್ಮಾಣ ಎಂಬುದನ್ನುನಾವೆಲ್ಲರೂ ಆರ್ಥ ಮಾಡಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಪಾಲನೇತ್ರಯ್ಯ, ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್, ಎಸ್.ಡಿ.ದಿಲೀಪ್ ಕುಮಾರ್,ಶಶಿಹುಲಿಕುಂಟೆ, ಪಾಲಿಕೆ ಸದಸ್ಯ
ಮಹೇಶ್,ಟಿ.ಆರ್.ಸದಾಶಿವಯ್ಯ, ಕೊಪ್ಪಳ್ ನಾಗರಾಜು, ಹೆಚ್.ಎಂ.ರವೀಶಯ್ಯ, ಬೆಸ್ಕಾಂ ಎಸ್‍ಇ ನಟರಾಜು, ವೀರಶೈವ,ಲಿಂಗಾಯಿತ ಸೇವಾ ಸಮಿತಿಯ ಅಧ್ಯಕ್ಷ ದರ್ಶನಕುಮಾರ್,
ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರವೀಶ್, ಕಾರ್ಯಾಧ್ಯಕ್ಷ ಎಂ.ಎನ್.ಗುರುಪ್ರಸಾದ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

(Visited 3 times, 1 visits today)