ತುಮಕೂರು:

      ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸದಸ್ಯರಾಗಿರುವ ಎಸ್.ಪಿ.ಮುದ್ದಹನುಮೇಗೌಡರೇ ಸ್ಪರ್ಧಿಸಲಿದ್ದು,ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಿದ್ದಾರೆ ಎಂಬ ಮಾಜಿ ಶಾಸಕ ಹೆಚ್.ನಿಂಗಪ್ಪ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.

      ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಅವರು,2019ರ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕುರಿತಂತೆ ಯಾವುದೇ ಒಪ್ಪಂದಗಳು ಇದುವರೆಗೂ ಮೈತ್ರಿ ಸರಕಾರದಲ್ಲಿ ನಡೆದಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ಮುಖಂಡರು ಹಾಲಿ ಇರುವ ಸಂಸದರಿಗೆ ಟಿಕೇಟ್ ನೀಡುವುದಾಗಿ ಘೋಷಿಸಿದೆ. ಅದಾಗ್ಯೂ ಹೆಚ್.ನಿಂಗಪ್ಪ ಅವರು ಈ ರೀತಿ ಹೇಳಿಕೆ ನೀಡಿರುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಲೋಕಸಭಾ ಸೀಟು ಕೈತಪ್ಪಲಿದೆ ಎಂದು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಸರಳ, ಸಜ್ಜನಿಕೆಯ ಎಸ್.ಪಿ.ಮುದ್ದಹನುಮೇಗೌಡರೇ ಅಭ್ಯರ್ಥಿಯಾಗಿ ಮುಂದುವರೆ ಯಲಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳು ಸೀಟು ಹಂಚಿಕೆ ಕುರಿತಂತೆ ಇದುವರೆಗೆ ಯಾವುದೇ ಚರ್ಚೆಯಾಗಿಲ್ಲ.ಹೀಗಿರುವಾಗ ಹೆಚ್.ನಿಂಗಪ್ಪ ಅವರ ಹೇಳಿಕೆ ಸಮಂಜಸವಲ್ಲ ಎಂದು ಡಾ.ರಫೀಕ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.

(Visited 24 times, 1 visits today)