ತುಮಕೂರು:

      ನಗರದ ವಿವಿಧೆಡೆಗಳಲ್ಲಿ ಸರಕಾರ ನೀಡಿದ್ದ 25 ಕೋಟಿ ರೂ ವಿಶೇಷ ಅನುದಾನದಲ್ಲಿ ಸಿ.ಸಿ.ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿ ಸಂದರ್ಭದಲ್ಲಿ ಕೆಲವು ಸಣ್ಣ,ಪುಟ್ಟ ತೊಂದರೆಗಳಾಗುವುದು ಸಹಜ, ನಾಗರಿಕರು ಸಹಕಾರ ನೀಡುವಂತೆ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

      ನಗರದ ಎಸ್.ಐ.ಟಿ. ಬಡಾವಣೆಯ 1 ರಿಂದ 3 ಅಡ್ಡರಸ್ತೆ ಹಾಗೂ 31ರಿಂದ 35ನೇ ಅಡ್ಡ ರಸ್ತೆಯಲ್ಲಿ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿ.ಸಿ.ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತಿದ್ದ ಅವರು, ಶೇ90ರಷ್ಟು ತೆರಿಗೆದಾರರಿರುವ ಈ ಬಡಾವಣೆಗೆ ಅತಿ ಹೆಚ್ಚಿನ ರೀತಿಯಲ್ಲಿಯೇ ಅನುದಾನ ಒದಗಿಸಲಾಗಿದೆ ಎಂದರು.

      ಕೊರೊನಾ ಸಂಕಷ್ಟದಲ್ಲಿಯೂ ಯಡಿ ಯೂರಪ್ಪನವರು ಪಾಲಿಕೆಗೆ 25 ಕೋಟಿ ರೂಗಳ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಅದರಲ್ಲಿ ಸಿಂಹಪಾಲು ಅಂದರೆ 5.50 ಕೋಟಿ ಅನುದಾನವನ್ನು ನಗರದಲ್ಲಿ ದೊಡ್ಡ ವಾರ್ಡುಗಳಲ್ಲಿ ಒಂದಾಗಿರುವ 26ನೇ ವಾರ್ಡಿಗೆ ನೀಡಲಾಗಿದೆ. ಆದರೂ ನಾಗರಿಕರಿಂದ ಸಾಕಷ್ಟು ಬೇಡಿಕೆಗಳು ಬರುತ್ತಿವೆ. ಹಂತ ಹಂತವಾಗಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

      ಪ್ರಸ್ತುತ 80 ಲಕ್ಷ ರೂ ಅನುದಾನದಲ್ಲಿ ಸುಮಾರು 3 ಕಿ.ಮಿ. ಉದ್ದದ ಸಿ.ಸಿ.ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ 30 ಅಡಿಗಳಿಗಿಂತಲೂ ಕಡಿಮೆ ಅಗಲವಾದ ರಸ್ತೆಗಳಿವೆ .ಅಂತಹ ಕಡೆಗಳಲ್ಲಿ ಚರಂಡಿಗೆ ಅಗೆದಾಗ ವಾಹನಗಳ ತೆಗೆಯಲು ತೊಂದರೆಯಾಗಬಹುದು. ಒಮ್ಮೆ ಸಿ.ಸಿ.ಚರಂಡಿ ನಿರ್ಮಾಣವಾದರೆ ಶಾಶ್ವತವಾಗಿ ಸಮಸ್ಯೆ ಬಗೆಹರಿಯುವುದರಿಂದ ನಾಗರಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.

      ಮೇಯರ್ ಶ್ರೀಮತಿ ಫರೀಧಾ ಬೇಗಂ ಮಾತನಾಡಿ, ನಗರಪಾಲಿಕೆಗೆ ಅನುದಾನದ ಕೊರತೆ ಇದ್ದಾಗ್ಯೂ ಅಭಿವೃದ್ಧಿ ಕಾರ್ಯಗಳಿಗೆ ಹಿಂದೆಟು ಹಾಕಿಲ್ಲ. ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಇರುವ ಅನುದಾನವನ್ನು ಎಲ್ಲಾ ವಾರ್ಡುಗಳಿಗೂ ನೀಡಬೇಕಾಗಿದೆ.ಈ ನಿಟ್ಟಿನಲ್ಲಿ ನಾಗರಿಕರು ಒತ್ತಡ ಹಾಕದೇ, ಹಂತ ಹಂತವಾಗಿ ತಮ್ಮ ವಾರ್ಡಿನ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೊಳ್ಳಲು ಸಹಕರಿಸಬೇಕೆಂದರು.

      ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಸಿ.ಸಿ.ಚರಂಡಿ ನಿರ್ಮಾಣ ಮಾಡಲಾಗಿದೆ. ಶೇ90ರಷ್ಟು ತೆರಿಗೆ ಕಟ್ಟುವ ಈ ವಾರ್ಡಿನ ಜನತೆ, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ನಾನು ಸ್ವತಃ ಗಮನಿಸಿದ್ದೇನೆ. ಕೆಲವೇ ದಿನಗಳಲ್ಲಿ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಆರಂಭವಾಗಲಿದ್ದು, ನಗರದ ನಾಗರಿಕರು ಹೆಚ್ಚಿನ ಅಂಕಗಳನ್ನು ನೀಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.

      26ನೇ ವಾರ್ಡಿನ ಪಾಲಿಕೆ ಸದಸ್ಯ ಹೆಚ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಶಾಸಕರು, ಅಧಿಕಾರಿಗಳ ಸಹಕಾರದಿಂದ ಇತರೆ ವಾರ್ಡುಗಳಿಗಿಂತ ನಮ್ಮ ವಾರ್ಡಿನಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ನಾಗರಿಕರು ಸಹ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ನಗರದಲ್ಲಿ ಅತ್ಯಂತ ಮಾದರಿ ವಾರ್ಡಾಗಿ ರೂಪಿಸುವುದು ನನ್ನ ಗುರಿ ಎಂದರು.

       ಕಾರ್ಯಕ್ರಮದಲ್ಲಿ ಪಾಲಿಕೆಯ ಅಧೀಕ್ಷಕ ಇಂಜಿನಿಯರ್ ಮಹೇಶ್, ಮುಖಂಡರಾದ ಮಂಜುನಾಥ್, ಕೊಪ್ಪಲ ನಾಗರಾಜು, ಚಂದ್ರಪ್ಪ, ವಿನಯ್, ವಿಶ್ವನಾಥ್, ರಮೇಶ್, ಮುದ್ದುರಾಜು, ನಟರಾಜು, ರಂಗನಾಥ್, ಕಂಚಿರಾಯಪ್ಪ, ಜೋತಿ, ಮಾರಣ್ಣ, ಹೆಚ್.ನಾರಾಯಣಪ್ಪ, ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

 

(Visited 6 times, 1 visits today)