ತುರುವೇಕೆರೆ: ಅಕ್ರಮ ಕಲ್ಲುಗಣಿಗಾರಿಕೆ ನೆಡೆಸುತ್ತಿರುವ ಕ್ರಷರ್ ಮಾಲೀಕರ ವಿರುದ್ಧ ಜಿಲ್ಲಾ, ತಾಲೂಕು ಆಡಳಿತ ಕೂಡಲೇ ಕ್ರಮ ಕೈಗೊಂಡು ಕ್ರಷರ್ ಯಂತ್ರ ತೆರವುಗೊಳಿಸದಿದ್ದರೆ ರೈತರೇ ತೆರವುಗೊಳಿಸಲು ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾದ್ಯ ಎಚ್ಚರಿಸಿದರು.
ತಾಲೂಕಿನ ಕೋಳಘಟ್ಟ ಗ್ರಾಮದ ಸರ್ವ ನಂಬರ್ ನಲ್ಲಿ ನೆಡೆಯುತ್ತಿರುವ ಕಲ್ಲು ಗಣಿಗಾರಿಕೆ ಕ್ರಷರ್ ಮಾಲೀಕನ ವಿರುದ್ದ ಗ್ರಾಮಸ್ಥರು ನೆಡೆಸುತ್ತಿರುವ ಆಹೋ ರಾತ್ರಿ ಪ್ರತಿಭಟನೆ ಹೋರಾಟದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು ಈ ಭಾಗದ ರೈತರಿಗೆ ಮಾರಕವಾಗಿರುವ ಕಲ್ಲು ಕ್ರಷರ್ ಸ್ಥಗಿತಗೊಳಿಸುವಂತೆ ಸುಮಾರು ದಿನಗಳಿಂದ ಕೋಳಘಟ್ಟ ಭಾಗದ ಗ್ರಾಮದ ರೈತರು ಹೋರಾಟ ಮಾಡುತ್ತಿದ್ದರು ಜಿಲ್ಲಾ ಹಾಗೂ ತಾಲೂಕು ಆಡಳಿತ, ದಂಡಿನಶಿವರ ಪೋಲೀಸರು ಮತ್ತು ಗಣಿಗಾರಿಕೆ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲ ಅಧಿಕಾರಿಗಳು ಯಾವುದೋ ಅಮಿಷಕ್ಕೆ ಒಳಗಾಗಿ ಕ್ರಷರ್ ಮಾಲೀಕನ ಜೊತೆ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ. ಕ್ರಷರ್ ಮಾಲೀಕ ಸರ್ಕಾರಿ ಗೋಮಾಳದಲ್ಲಿ ಕ್ರಷರ್ ಯಂತ್ರ ಹಾಗೂ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಸರ್ವೆಯಲ್ಲಿ ತಿಳಿದಿದ್ದರು ಸುಮಾರು ದಿನಗಳಿಂದ ಅದಿಕಾರಿಗಳು ತೆರವುಗೊಳಿಸುವ ನಾಟಕವಾಡುತ್ತಿದ್ದಾರೆ. ಜಿಲ್ಲಾದಿಕಾರಿಗಳಿಗೂ ಈ ಅಕ್ರಮ ಕ್ರಷರ್ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹಿನ್ನಲೇ ಏನು ಎಂಬುದು ಅರ್ಥವಾಗುತ್ತಿಲ್ಲ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದಿದ್ದರೆ ಸಾವಿರಾರು ರೈತರೇ ಸ್ವಯಂ ಪ್ರೇರಿತರಾಗಿ ಕ್ರಷರ್ ಗೆ ಮುತ್ತಿಗೆ ಹಾಕಿ ಅಕ್ರಮವಾಗಿರುವ ಕ್ರಷರ್ ಯಂತ್ರಗಳನ್ನು ಕಿತ್ತು ಹಾಕಲಾಗುವುದು ಮುಂದಿನ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಗಾರರು ಎಂದು ಎಚ್ಚರಿಸಿದರು.
ಕ್ರಷರ್ ಮಾಲೀಕ ಪುಡಿ ರೌಡಿಗಳನ್ನು ಬಿಟ್ಟು ಗ್ರಾಮಸ್ಥರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನೆಡೆಸಿ ಸುಳ್ಳು ದೂರು ನೀಡಿ ರೈತರ ಮೇಲೇ ಕೇಸ್ ಗಳನ್ನು ದಾಖಲಿಸುತ್ತಿದ್ದಾರೆ. ದಂಡಿನಶಿವರ ಪೋಲೀಸರು ರೈತರು ನೀಡಿದ ದೂರುಗಳನ್ನು ತೆಗೆದುಕೊಳ್ಳದೇ ಕ್ರಷರ್ ಮಾಲೀಕನ ದೂರುಗಳನ್ನು ತೆಗೆದುಕೊಂಡು ಪಕ್ಷ ಪಾತ ನೀತಿ ಅನುಸರಿಸುತ್ತಿದ್ದಾರೆ. ರೈತರಿಗೆ ರಕ್ಷಣೆ ನೀಡುವ ಪೊಲೀಸರು ಕ್ರಷರ್ ಮಾಲೀಕರಿಗೆ ರಕ್ಷಣೆ ನೀಡಿ ಗಣಿ ನೆಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಕೂಡಲೇ ರೈತರ ಮೇಲೆ ದಾಖಲಾಗಿರುವ ಎಲ್ಲ ಕೇಸ್ ಗಳನ್ನು ಕ್ಲೋಸ್ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಿನಾಹಳ್ಳಿ ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಗೌರವ ಅಧ್ಯಕ್ಷ ಮಾರಿ ಮುತ್ತಣ್ಣ, ಪ್ರಧಾನಕಾರ್ಯದರ್ಶಿ ತೋಂಟಾರಾಧ್ಯ, ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಯ್ಯ, ಉಪಾಧ್ಯಕ್ಷ ಉಮೇಶ್, ಶಿರಾ ತಾಲೂಕು ಬುಕ್ಕಪಟ್ಟಣ ಹೋಬಳಿ ಅಧ್ಯಕ್ಷ ರಾಜಣ್ಣ, ತಾಲೂಕು ಸಂಚಾಲಕ ಚನ್ನಕೇಶವ, ಕೋಳಘಟ್ಟ ಗ್ರಾಮದ ಮುಖಂಡರಾದ ಶಿವಶಂಕರ್, ಶಶಿಶೇಖರ್, ಕೇಶವ್, ಮಹಾಲಿಂಗಯ್ಯ, ರಾಜೀವ್, ಉಮೇಶ್, ಶಿಲ್ಪ, ಶಾರದಮ್ಮ, ಶಿವಮ್ಮ, ರೇಖಾ, ನಾಗಮಣಿ, ಕಮಲ, ಪುಷ್ಪಾವತಿ, ರಮ್ಯ, ಶ್ವೇತ ಸೇರಿದಂತೆ ರೈತರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಇದ್ದರು.
(Visited 1 times, 1 visits today)