ತುಮಕೂರು: ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಎರಡು ರಸ್ತೆ ಮೇಲ್ಸೇತುವೆಗಳಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿ, ಗುಬ್ಬಿ ತಾಲ್ಲೂಕಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ ೫೬ (ಬೆಂಚಗೆರೆ ಗೇಟ್) ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ ೫೯ (ನಂದಿಹಳ್ಳಿ ಗೇಟ್) ಬದಲಿಗೆ ಈ ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈ ಹೊಸ ರಸ್ತೆ ಮೇಲ್ಸೇತುವೆಗಳು ರಸ್ತೆ ಮತ್ತು ರೈಲು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ, ಲೆವೆಲ್ ಕ್ರಾಸಿಂಗ್ ಗೇಟ್ ಗಳಲ್ಲಿ ಉಂಟಾಗುವ ವಿಳಂ ಬವನ್ನು ತಪ್ಪಿಸುವ ಮೂಲಕ ಈ ಪ್ರದೇಶದ ಜನರಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದರು.
ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ, ಈ ಯೋಜನೆಗಳು ಈ ಪ್ರದೇಶದ ಜನರಿಗೆ ಉತ್ತಮ ಮತ್ತು ಸುರಕ್ಷಿತ ಪ್ರಯಾಣದತ್ತ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಸಾಕಷ್ಟು ಅನುದಾನ ನೀಡುತ್ತಿರುವುದರಿಂದ ರೈಲ್ವೆ ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಕಾಣುತ್ತಿವೆ. ಈಗಾಗಲೇ ೧೩೬ ಕ್ಕೂ ಹೆಚ್ಚು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿದ್ದೇವೆ. ದೂರದ ಸ್ಥಳಗಳಿಗೆ ಅಮೃತ್ ಭಾರತ್ ರೈಲುಗಳನ್ನು ಸಹ ಓಡಿಸಲಾಗುತ್ತಿದೆ. ೨೦೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ, ಕರ್ನಾಟಕದ ಅನೇಕ ನಿಲ್ದಾಣಗಳು ಅಮೃತ್ ಭಾರತ್ ನಿಲ್ದಾಣ ಅಭಿವೃದ್ಧಿ ಯೋಜನೆಯಡಿ ಪುನರಾಭಿವೃದ್ಧಿಗೊಳ್ಳುತ್ತಿದೆ.
ಈಗ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಗಳು ಪ್ರಯಾಣವನ್ನು ಸುಗಮಗೊಳಿಸಿ ಲೆವೆಲ್ ಕ್ರಾಸಿಂಗ್ ಗಳಲ್ಲಿ ಕಾಯುವ ಸಮಯವನ್ನು ನಿವಾರಿಸುತ್ತವೆ. ಈ ನಿರ್ಮಾಣ ಕಾರ್ಯವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಬೆಂಚಗೆರೆ ಗೇಟ್‌ನಲ್ಲಿ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಸಂಖ್ಯೆ ೫೬ ರ ಬದಲಿಗೆ ರಸ್ತೆ ಮೇಲ್ಸೇತುವೆಯನ್ನು ರೂ ೩೬.೭೧ ಕೋಟಿ ಅಂದಾಜು ವೆಚ್ಚದಲ್ಲಿ ಮತ್ತು ನಂದಿಹಳ್ಳಿ ಗೇಟ್‌ನಲ್ಲಿ ರೂ ೩೬.೨೯ ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ರಸ್ತೆ ಮೇಲ್ಸೇತುವೆಗಳ ನಿರ್ಮಾಣದಿಂದ ರಸ್ತೆ ಸಂಚಾರ ಸುಗಮಗೊಳ್ಳಲಿದ್ದು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್, ಮುಖ್ಯ ಎಂಜಿನಿಯರ್ ಪ್ರಸಾದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹ ನ್‌ಪುರಿಯಾ ಮತ್ತು ಇತರರು ಉಪಸ್ಥಿತರಿದ್ದರು.
(Visited 1 times, 1 visits today)