
ತುಮಕೂರು: ಹಳ್ಳಿಗಾಡಿನ ಬಡವರು, ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಮಾತ್ರ ಇದೆ. ಇದನ್ನು ಅರಿತು ಸಹಕಾರಿ ರಂಗದಲ್ಲಿರುವ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ನಗರದ ಅರ್ಬನ್ ರೆಸಾರ್ಟ್ನ ಸಭಾಂಗಣದಲ್ಲಿ ತುಮಕೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಆಂದೋಲನ ಜನರ ಆಂದೋಲನ. ಸಹಕಾರಿ ಆಂದೋಲನದಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ ಜನರ ಬದುಕು ಉತ್ತಮಗೊಳಿಸುವುದು ಸಹಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಸದಾ ಜನರ ನಿಕಟ ಸಂಪರ್ಕ ಸಹಕಾರಿ ಆಂದೋಲನದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಇರುತ್ತದೆ. ಬೇರೆ ಯಾವ ರಾಜಕಾರಣಿಗಳಿಗೂ ಜನರ ನಿಕಟ ಸಂಪರ್ಕ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಹಕಾರಿ ತತ್ವ ಸಿದ್ದಾಂತದ ಮೇಲೆ ನಾವೆಲ್ಲರೂ ನಡೆಯಬೇಕು. ಆಗ ಮಾತ್ರ ಸಹಕಾರಿ ರಂಗದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದ ಅವರು, ಸಹಕಾರಿಗಳು ಮನಸ್ಸು ಮಾಡಿದರೆ ರಾಜಕೀಯವಾಗಿ ಏನು ಬೇಕಾದರೂ ಸಾಧಿಸಬಹುದು ಎಂದರು.
ಸಹಕಾರಿ ಆಂದೋಲನ ಯಾವತ್ತೂ ಸಹ ಜಾತಿ, ಪಕ್ಷದ ಆಧಾರದ ಮೇಲೆ ಕೆಲಸ ಮಾಡಿಲ್ಲ. ಎಲ್ಲ ವರ್ಗದವರ ಪರವಾಗಿ ಹಾಗೂ ಪಕ್ಷಾತೀತವಾಗಿ ಸಹಕಾರಿ ರಂಗ ಕೆಲಸ ಮಾಡುತ್ತಿದೆ. ಹೀಗಿರುವುದರಿಂದಲೇ ಸಹಕಾರಿ ಕ್ಷೇತ್ರ ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದೆ. ಇದನ್ನು ಮತ್ತಷ್ಟು ಪ್ರಗತಿಪಥದತ್ತ ಕೊಂಡೊಯ್ಯಲು ನಾವೆಲ್ಲರೂ ಮನಸ್ಸು ಮಾಡಬೇಕು ಎಂದು ಹೇಳಿದರು.
ಖಾಸಗಿಯವರು ರೈತರು ಹಾಗೂ ಬಡವರನ್ನು ಶೋಷಣೆ ಮಾಡಬಾರದು ಎಂಬ ಉದ್ದೇಶದಿಂದ ಪತ್ತಿನ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ಇಂದು ಪತ್ತಿನ ವ್ಯವಸ್ಥೆ ಸಹಕಾರ ರಂಗದಲ್ಲಿ ಬೃಹತ್ ಆಗಿ ಬೆಳೆದಿರುವುದು ಹೆಮ್ಮೆಯ ವಿಷಯ. ಸಹಕಾರಿ ಸಂಸ್ಥೆಗಳು ರೈತರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ರೈತರಿಗೆ ದುಬಾರಿಯಾಗದ ರೀತಿಯಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಪ್ರತಿಯೊಂದು ವಿಚಾರದಲ್ಲೂ ರೈತರು ಸಹಕಾರಿ ವ್ಯವಸ್ಥೆ ಮೇಲೆ ಅವಲಂಬಿತರಾದಾಗ ಮಾತ್ರ ನಾವು ಅವರಿಗೆ ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.
ಸಹಕಾರಿ ಸಂಸ್ಥೆಗಳಿಗೆ ಕೇವಲ ಸಾಲ ಕೊಡುವುದರಿಂದ ಲಾಭ ಬರುವುದಿಲ್ಲ. ಹಳ್ಳಿಗಾಡಿನ ರೈತರಿಗೆ ಕಡಿಮೆ ದರದಲ್ಲಿ ಸಾಲ ವಿತರಿಸಬೇಕು. ಜತೆಗೆ ರೈತರ ಅಗತ್ಯತೆಗಳಿಗೂ ಸ್ಪಂದಿಸುವ ಕೆಲಸ ಮಾಡಬೇಕು. ಲಾಭ ಗಳಿಸುವ ಜತೆಗೆ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ರೈತರು ಹಾಗೂ ಬಡವರನ್ನು ಖಾಸಗಿ ಲೇವಾದೇವಿ ಸಂಸ್ಥೆಗಳಿAದ ಶೋಷಣೆ ಮುಕ್ತರನ್ನಾಗಿ ಮಾಡಬೇಕು ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಅದನ್ನು ರೈತಾಪಿ ವರ್ಗದವರಿಗೆ ಸಾಲ ನೀಡಿ ಸಹಾಯ ಮಾಡಬೇಕು. ಅದೇ ರೀತಿ ಸಾಲ ಮರುಪಾವತಿಯತ್ತಲೂ ಗಮನ ಹರಿಸಿ ಸಂಘಗಳ ಪ್ರಗತಿಗೆ ಮುಂದಾಗಬೇಕು ಎಂದು ತಿಳಿಸಿದರು.
ಪತ್ತಿನ ಸಹಕಾರ ಸಂಘಗಳಿಗೆ ತಿಜೋರಿ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ. ಹೆಚ್ಚು ಹೆಚ್ಚು ಚಿನ್ನಾಭರಣ ಸಾಲ ಸಹ ವಿತರಿಸಬೇಕು ಎಂದು ಹೇಳಿದರು.
ರೈತರು ಸದೃಢವಾಗಿದ್ದರೆ ಗ್ರಾಮೀಣ ಪ್ರದೇಶದ ಜನರು ನೆಮ್ಮದಿಯಾಗಿರುತ್ತಾರೆ. ಅದೇ ರೀತಿಯ ರೈತರು ಆರ್ಥಿಕವಾಗಿ ಸದೃಢವಾದಾಗ ಮಾತ್ರ ದೇಶ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಹಕಾರಿ ರಂಗ ಹಳ್ಳಿಗಾಡಿನ ಜನರ ಜೀವನ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದರು.
ತುಮಕೂರು ತಾಲ್ಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನನ್ನನ್ನು ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಲು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತುಮಕೂರು ತಾಲ್ಲೂಕು ಮೊದಲಿನಿಂದಲೂ ಸಹಕಾರಿ ಆಂದೋಲನದಲ್ಲಿ ತೊಡಗಿಸಿಕೊಂಡಿದೆ. ಯಾವತ್ತೂ ಸಹ ಜಾತಿ, ಪಕ್ಷದ ಆಧಾರದ ಮೇಲೆ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಎಲ್ಲ ವರ್ಗದ ಬಡವರು, ರೈತರ ಬದುಕು ಉತ್ತಮಗೊಳಿಸುವುದೇ ಸಹಕಾರಿ ಆಂದೋಲನದ ಮುಖ್ಯ ಉದ್ದೇಶ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ. ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು ಅವರು, ಸಹಕಾರಿ ಸಂಘಗಳಲ್ಲಿ ರೈತರಿಗೆ ಹೊಸ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು. ಅದೇ ರೀತಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರು ಒಂದು ವೇಳೆ ಮೃತಪಟ್ಟರೆ ಅಂತಹವರ ೨೫ ಸಾವಿರ ರೂ. ವರೆಗಿನ ಸಾಲದ ಮೊತ್ತವನ್ನು ಮನ್ನಾ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣನವರಿಗೆ ಮನವಿ ಮಾಡಿದರು.
ಇವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್. ರಾಜಣ್ಣನವರು ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಶಾಸಕ ಕೆ.ಎನ್. ರಾಜಣ್ಣ ದಂಪತಿಗಳು ಸನ್ಮಾನಿಸಿದರು. ನಂತರ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರುಗಳು ಶಾಸಕ ಕೆ.ಎನ್. ರಾಜಣ್ಣ ಹಾಗೂ ಶಾಂತಲಾ ರಾಜಣ್ಣ ದಂಪತಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಹಕಾರಿಗಳಾದ ಶಾಂತಲಾ ರಾಜಣ್ಣ, ತಮ್ಮಣ್ಣರೆಡ್ಡಿ, ಗಂಗಣ್ಣ, ವೆಂಕಟೇಗೌಡ, ಕಲ್ಲಹಳ್ಳಿ ದೇವರಾಜು, ಪಿ. ಮೂರ್ತಿ, ಆರ್.ಎನ್. ಗೌಡ, ಡಿಸಿಸಿ ಬ್ಯಾಂಕ್ ಸಿಇಓ ಜಂಗಮಪ್ಪ, ಟಿ.ಪಿ. ಮಂಜುನಾಥ್, ಉಮೇಶ್, ನಾರಾಯಣಗೌಡ, ಲಕ್ಷಿ÷್ಮÃನಾರಾಯಣ ಮತ್ತಿತರರು ಉಪಸ್ಥಿತರಿದ್ದರು.





