
ತುಮಕೂರು: ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಗುರು-ವಿರಕ್ತ ಮಠಾಧೀಶರೆಲ್ಲಾ ಒಗ್ಗೂಡಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಸಂದೇಶಗಳನ್ನು ಜನತೆಗೆ ಮುಟ್ಟಿಸುವ ೩೦ ದಿನಗಳ ಬಸವ ಸಂಸ್ಕೃತಿ ಅಭಿಯಾನ ಅತ್ಯಂತ ಯಶಸ್ವಿಯಾಯಿತು. ಆದರೆ ಈ ಅಭಿಯಾನದ ನೇತೃತ್ವವನ್ನು ವಹಿಸಿದ್ದ ಕೆಲವು ಮಠಾಧೀಶರ ವಿರುದ್ಧ ಕನ್ನೇರಿ ಮಠದ ಅಧ್ಯಕ್ಷರಾದ ಸಿದ್ದೇಶ್ವರ ಪೂಜ್ಯರು ಬಳಸಿದ ಪದಗಳ ಬಗ್ಗೆ ಬೆಟ್ಟದಹಳ್ಳಿ ಗವಿಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿಗಳು ಅಸಮಧಾನ ವ್ಯಕ್ತಪಡಿಸಿದರು.
ಅವರು ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ನವರು, ಇತರ ಬಸವಪರ ಸಂಘಟನೆಗಳು ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕರ್ತರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಶರಣ ಸಂಸ್ಕೃತಿ ಎಂಬ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿದ ಬಸವಣ್ಣ ಎಂದಿಗೂ ಮತ್ತೊಬ್ಬರನ್ನು ಟೀಕಿಸದೆ ತನ್ನನ್ನು ತಾನು ಅರಿತು ಬದುಕನ್ನು ಸಾಗಿಸಿದರೆ ನಿರ್ಮಾಣ ಮಾಡಲು ಸಾಧ್ಯ ಎಂದು ಪ್ರತಿಪಾದಿಸಿ ಅಂದಿನ ಸಮಾಜದಲ್ಲಿ ನೂತನ ವಿಚಾರಗಳನ್ನು ಮುಂದಿಟ್ಟು ಜನಜಾಗೃತಿ ಮೂಡಿಸಿದನು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರಾದ ರಾಯಸಂದ್ರ ರವಿ ಮಾತನಾಡಿ ಬಸವ ಸಂಸ್ಕೃತಿ ಭವ್ಯ ಭಾರತದ ಶ್ರೇಷ್ಠ ಸಂಸ್ಕೃತಿ. ಇದು ಸಮಸಮಾಜದ ನಿರ್ಮಾಣಕ್ಕೆ ಮೂಲಬೇರು ಮತ್ತು ದೇಶದ ಆರ್ಥಿಕತೆಗೆ ಸಹಾಯವಾಗುತ್ತದೆ. ಆಧ್ಯಾತ್ಮಿಕ ಬದುಕಿಗೆ ಬಸವತತ್ವ ಶಕ್ತಿ ನೀಡುತ್ತದೆ. ಬಸವಣ್ಣ ಒಬ್ಬ ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ. ನಾವೆಲ್ಲ ಆತನ ಅನುಯಾಯಿಗಳು ವಿನಃ ಅವನ ಸಂದೇಶಗಳ ಬಗ್ಗೆ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶ. ಇದು ಸಫಲವಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ಸಾಗುತ್ತದೆ ಎಂದರು.
ಇತಿಹಾಸ ಸಂಶೋಧಕರಾದ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ ಬಸವಣ್ಣನವರನ್ನು ೧೨ನೇ ಶತಮಾನದಿಂದಲೂ ವಿರೋಧಿಸುವ ಗುಂಪು ಇದ್ದು, ಅದು ಈಗಲೂ ಸಕ್ರೀಯವಾಗಿದೆ. ಇಂದಿನ ಸ್ವಾ ರ್ಥ ಪ್ರಪಂಚದಲ್ಲಿ ಬಸವಣ್ಣನ ವಿಚಾರಗಳು ಸಮಾಜಕ್ಕೆ ದಾರಿದೀಪವಾಗಿವೆ. ಆದರೆ ಆತನ ವಿಚಾರಧಾರೆಗಳನ್ನು ಹೇಳುವವರ ಸಂಖ್ಯೆಯೇ ಇಂದು ಅಧಿಕವಾಗಿದ್ದು, ಅದನ್ನು ಆಚರಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾದಿಸಿದ ಅವರು, ತುಮಕೂರು ನಗರದ ಅಮಾನಿ ಕೆರೆಯ ಉದ್ಯಾನವನದಲ್ಲಿ ಬಸವಣ್ಣನವರ ಪ್ರತಿಮೆಯನ್ನು ಸರ್ಕಾರ ಸ್ಥಾಪಿಸಿ ಬಸವ ಸಂದೇಶವನ್ನು ಸಾರಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಕೆರೆಮಠದ ತಿಪ್ಪೇರುದ್ರಸ್ವಾಮಿಗಳು ಲಿಂಗಾಯತ ಎನ್ನುವುದು ಒಂದು ಜಾತಿಯಲ್ಲ, ಅದೊಂದು ಶರಣ ತತ್ವ. ಅದು ಜಾತಿಯಾಚೆಗಿನ ಸಿದ್ಧಾಂತ, ಅದೊಂದು ಧರ್ಮ. ಈ ಪರಂಪರೆಯನ್ನು ಜಾತಿಗೆ ಸೀಮಿತ ಮಾಡುವ ಪ್ರಯತ್ನ ಮಾಡಿದರೆ ಅದು ಸಫಲವಾಗುವುದಿಲ್ಲ. ಆ ದ್ದರಿಂದ ಲಿಂಗಾಯತರೆಲ್ಲಾ ಬಸವಾಚರಣೆಗಳನ್ನು ಅಳವಡಿಸಿ ಕೊಂಡು ಆಚರಣೆ ಮಾಡಿ ಎಂದು ಕರೆ ನೀಡಿದರು.
ವಿದ್ಯಾವಾಹಿನಿ ಸಮೂಹ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್, ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಹಾಲನೂರು ಲೇಪಾಕ್ಷ್, ಈ.ಲೋಕೇಶ್ವರಪ್ಪ, ಡಿ.ವಿ.ಶಿವಾನಂದ್, ಶ್ರೀಕಾಂತ್, ಸಿದ್ದಪ್ಪ, ಶೈಲಾ ನಾಗರಾಜ್, ಸುಶೀಲಾ ಸದಾಶಿವಯ್ಯ ಇನ್ನು ಮುಂತಾದವರು ಹಾಜರಿದ್ದರು.
ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಬಿ.ನಾಗಭೂಷಣ ವಂದಿಸಿದರು. ಸಾಗರನ ಹಳ್ಳಿ ಪ್ರಭು ನಿರೂಪಿಸಿದರು.





