ತುಮಕೂರು: ಮಧುಗಿರಿ ತಾಲ್ಲೂಕು ಕಸಾಪುರ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಸಿಂಹಾದ್ರಿ ಹತ್ಯೆ ಖಂಡಿಸಿ ಜಿಲ್ಲಾ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ, ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ಕಸಾಪುರದಲ್ಲಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಸಂಚು ನಡೆಸಿ ಪರಿಶಿಷ್ಟ ಜಾತಿಯ ಸಿಂಹಾದ್ರಿಯನ್ನು ಕೊಲೆ ಮಾಡಲಾಗಿದೆ. ನೀನು ಕೀಳು ಜಾತಿಯವನು ಗಣಪತಿ ಹತ್ತಿರ ಏಕೆ ಬಂದೆ ಎಂದು ಮಾರುತೇಶ್ ಎಂಬಾತ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿ ಹತ್ಯೆ ಮಾಡಿರುತ್ತಾನೆ. ಕೊಲೆ ಹಿಂದಿರುವ ಪಿತೂರಿಯನ್ನು ತನಿಖೆ ಮಾಡಬೇಕು. ಇದೊಂದು ಅತ್ಯಂತ ಹೇಯ, ಅಮಾನವೀಯ, ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ ಎಂದರು.
ಮೀಸಲಾತಿ ಕ್ಷೇತ್ರದಲ್ಲಿ ಗೆದ್ದು ದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿರುವ ಜಿಲ್ಲಾ ಮಂತ್ರಿ ಪರಮೇಶ್ವರ್ ಅವರು ದಲಿತ ಯುವಕನ ಹತ್ಯೆ ನಡೆದರೂ ಅವನ ಮನೆಗೆ ಭೇಟಿ ನೀಡಿ, ಆತನ ತಾಯಿಗೆ ಸಾಂತ್ವನ ಹೇಳಿ ಪರಿಹಾರಕೊಡಿಸುವ ಕಾಳಜಿ ತೋರಿಸಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಜವಾಬ್ದಾರಿ ಮರೆತು ಆರ್ಎಸ್ಎಸ್ ಹಿಂದೆ ಬಿದ್ದಿದ್ದಾರೆ. ಇಂತಹ ಅಸಮರ್ಥ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ವೈ.ಹೆಚ್. ರವಿಚಂದ್ರ ಮಾತನಾಡಿ, ಕಸಾಪುರದ ದಲಿತ ಯುವಕ ಸಿಂಹಾದ್ರಿ ಕೊಲೆ ಖಂಡನೀಯ. ಇದ್ದಒಬ್ಬನೇ ಮಗನನ್ನು ಕಳೆದುಕೊಂಡು ಆತನ ತಾಯಿ ಅನ್ನಪೂರ್ಣಮ್ಮ ದಿಕ್ಕು ತೋಚದಂತಾಗಿದ್ದಾರೆ. ಇಂತಹ ಸ್ಥಿತಿಯಲ್ಲೂ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಮೃತನ ಮನೆಗೆ ಹೋಗಿ ಆತನ ತಾಯಿಗೆ ಸಾಂತ್ವನ ಹೇಳಿ, ಪರಿಹಾರ ನೀಡುವ ಪ್ರಯತ್ನ ಮಾಡಲಿಲ್ಲ. ಕೂಡಲೇ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ನಿರಂತರವಾಗಿ ಕೊಲೆ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಜಾತಿ ಕಾರಣಕ್ಕೆ ಯಾರೊಬ್ಬರೂ ಬಲಿಯಾಗಬಾರದು. ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಸಚಿವ ಡಾ. ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ವೈ.ಹೆಚ್. ರವಿಚಂದ್ರ ಒತ್ತಾಯಿಸಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಭೈರಣ್ಣ, ಹೆಚ್.ಎಂ. ರವೀಶಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ಕಾರ್ಯದರ್ಶಿ ಕೆ. ವೇದಮೂರ್ತಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ನಗರ ಅಧ್ಯಕ್ಷ ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಮಹಿಳಾ ಮೋರ್ಚಾ ನಗರಅಧ್ಯಕ್ಷೆ ವಸಂತಮ್ಮ, ಜಿಲ್ಲಾ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಂಜನಮೂರ್ತಿ, ಶಿವರಾಜ್, ಜಗದೀಶ್, ಕಾರ್ಯದರ್ಶಿ ಸಿದ್ಧಗಂಗಯ್ಯ, ನಗರಅಧ್ಯಕ್ಷ ನಾಗರಾಜು, ಮುಖಂಡರಾದ ಹೊಳಕಲ್ಲು ಆಂಜನಪ್ಪ, ನರಸಿಂಹಮೂರ್ತಿ, ವೆಂಕಟೇಶ್, ವಿ. ಪ್ರತಾಪ್, ನವೀನ್ ಕುಮಾರ್, ಬಿ.ಹೆಚ್. ಗಂಗಾಧರ್, ಜಗದೀಶ್, ವರದಯ್ಯ, ಧನಂಜಯ್, ಶಿವರಾಜ್, ಬಂಬೂ ಮೋಹನ್, ಹನುಮಂತರಾಜು, ಗಂಗೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
(Visited 1 times, 1 visits today)





