ತುಮಕೂರು: ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿ ಮತ್ತು ಬೆಕ್ಕುಗಳಿಂದ ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವರೇಬಿಸ್ ದಿನಾಚರಣೆಯ ಗುರಿಯಾಗಿದ್ದು, ಪ್ರತಿಯೊಬ್ಬರೂ ಸಹ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ವರ್ಷಕ್ಕೊಮ್ಮೆ ರೇಬಿಸ್ ಲಸಿಕೆಯನ್ನು ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಹೆಚ್.ಎಂ. ಶಿವಪ್ರಸಾದ್ ತಿಳಿಸಿದರು.
ನಗರದ ಪಶು ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಮರಳೂರಿನ ಇನ್ನರ್ವ್ಹೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ನಾಯಿಗಳಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ರೇಬಿಸ್ ರೋಗದ ವಿರುದ್ಧ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ೨೧ನೇ ಜಾನುವಾರು ಗಣತಿ ಪ್ರಕಾರ ಸುಮಾರು ೩೮ ರಿಂದ ೪೦ ಸಾವಿರ ಸಾಕು ನಾಯಿ ಮತ್ತು ಬೆಕ್ಕುಗಳಿವೆ. ಪ್ರಾಣಿಜನ್ಯ ರೋಗ ಪ್ರಾಣಿಗಳಿಂದ ಮನುಷ್ಯನಿಗೆ ಬರುವ ರೋಗವಾಗಿದೆ. ಈ ರೋಗ ಬಂದರೆ ಚಿಕಿತ್ಸೆ ಇಲ್ಲ ಎಂದರು.
ಜಿಲ್ಲೆಯಲ್ಲಿ ಬೀದಿನಾಯಿಗಳು ಸುಮಾರು ೭೫ ಸಾವಿರದಿಂದ ೮೦ ಸಾವಿರ ಇವೆ. ಮಹಾನಗರ ಪಾಲಿಕೆ, ಪುರಸಭೆ, ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲೂ ಸಹ ಬೀದಿ ನಾಯಿಗಳನ್ನು ಹಿಡಿದು ರೇಬಿಸ್ ಲಸಿಕೆ ಹಾಕವಂತೆ ಸರ್ಕಾರದ ಆದೇಶವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಂಡರೆ ಬೀದಿ ನಾಯಿಗಳಿಗೆ ಲಸಿಕೆ ಹಾಕಲು ಇಲಾಖೆ ಸಿದ್ದವಿದೆ ಎಂದರು.
ತುಮಕೂರು ನಗರದಲ್ಲಿ ೨೫೦೦ ಬೀದಿ ನಾಯಿಗಳನ್ನು ಹಿಡಿದು ಈಗಾಗಲೇ ರೇಬಿಸ್ ಲಸಿಕೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನಾಯಿಗಳಿಗೆ ಈ ಲಸಿಕೆ ಹಾಕಲಾಗುವುದು ಎಂದರು.
ಈ ಅಭಿಯಾನದಲ್ಲಿ ಪ್ರಾಣಿಪ್ರಿಯರು ಮತ್ತು ನಾಯಿ ಸಾಕಾಣಿಕೆದಾರರು ಕಡ್ಡಾಯವಾಗಿ ಪಾಲ್ಗೊಂಡು ರೇಬಿಸ್ ತಡೆಗಟ್ಟಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಇನ್ನರ್ ವ್ಹೀಲ್ ಕ್ಲಬ್ನ ಪ್ರಿಯಾ ಪ್ರದೀಪ್ ಮಾತನಾಡಿ, ಕಳೆದ ೧೨ ವರ್ಷಗಳಿಂದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಇನ್ನರ್ ವ್ಹೀಲ್ ಕ್ಲಬ್ ವಿಶ್ವ ರೇಬಿಸ್ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಜಿಲ್ಲೆಯಲ್ಲಿ ಇನ್ನರ್ ವ್ಹೀಲ್ ವತಿಯಿಂದ ಮೊದಲು ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದು ನಮ್ಮ ಕ್ಲಬ್ಗೆ ಹೆಮ್ಮೆಯ ಸಂಗತಿ ಎಂದರು.
ಕಳೆದ ೧೨ ವರ್ಷಗಳಿಂದ ಈ ದಿನಾಚರಣೆಯನ್ನು ಆಚರಿಸಲು ಅವಕಾಶ ಮಾಡಿಕೊಡುತ್ತಿರುವ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದಧನ್ಯವಾದ ಅರ್ಪಿಸುತ್ತೇವೆ ಎಂದು ಅವರು ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶದ ಡಾ. ರುದ್ರಪ್ರಸಾದ್ ಮಾತನಾಡಿ, ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಪಶುಪಾಲನಾ ಇಲಾಖೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಸಾಕು ನಾಯಿಗಳು ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕಲಾಗುತ್ತಿದೆ ಎಂದರು.
ರೇಬಿಸ್ ವೈರಸ್ನಿಂದ ಬರುವಂತಹ ರೋಗ. ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. ಈ ರೋಗ ಬರದಂತೆ ನೋಡಿಕೊಳ್ಳುವುದೇ ಚಿಕಿತ್ಸೆ. ಇದು ಪ್ರಾಣಿಗಳಿಂದ ಮನುಷ್ಯನಿಗೆ ಹರಡುವಂತಹ ರೋಗವಾಗಿದೆ ಎಂದರು.
ಹುಚ್ಚು ನಾಯಿಗಳಿಂದ ಅತಿ ಹೆಚ್ಚು ಹರಡುವ ರೋಗ ಇದಾಗಿದೆ. ಮನುಷ್ಯನಿಗೆ ಈ ರೋಗ ಹರಡಿದರೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಉಚಿತವಾಗಿ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ರೇಬಿಸ್ ಲಸಿಕೆ ಹಾಕಿಸುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಸಹ ತಪ್ಪದೇ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಇಲಾಖೆ ವತಿಯಿಂದ ವರ್ಷಕ್ಕೊಮ್ಮೆ ಹಾಕುವ ಈ ರೇಬಿಸ್ ಲಸಿಕೆಯನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಡಾ. ವೆಂಕಟೇಶಬಾಬು ರೆಡ್ಡಿ, ಡಾ. ರುದ್ರಪ್ರಸಾದ್, ಡಾ. ವಿಜಯಲಕ್ಷಿ÷್ಮ, ಡಾ. ಅನುಪಮಾ, ಡಾ. ಜಯಂತಿ, ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಲತಾ, ಕಾರ್ಯದರ್ಶಿ ರಶ್ಮಿ, ಪ್ರಿಯಾ ಪ್ರದೀಪ್, ನಿರ್ಮಲಗೌಡ ಮತ್ತಿತರರು ಭಾಗವಹಿಸಿದ್ದರು.
(Visited 1 times, 1 visits today)





