ತುಮಕೂರು: ನಾವು ಕೇವಲ ಹೊಟ್ಟೆತುಂಬ ಊಟವನ್ನು ಉಣಬಡಿಸುತ್ತಿಲ್ಲ. ಬದಲಿಗೆ, ಈ ದೇಶದ ಭವಿಷ್ಯವನ್ನು ರೂಪಿಸುವ ಯುವಜನರ ಕೈಗೆ ಶಕ್ತಿ ತುಂಬುತ್ತಿದ್ದೇವೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ, ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ, ಅನ್ನಪೂರ್ಣೇಶ್ವರಿ ಮಧ್ಯಹ್ನದ ಆಹಾರ ವಿತರಣಾ ಸಮಿತಿ, ತುಮಕೂರಿನ ಅಶೋಕನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ಹಾಗೂ ತುಮಕೂರು ಸರ್ಕಾರದ ಐಟಿಐ ಇವರ ಸಂಯುಕ್ತ ಆಶ್ರಯದಲ್ಲಿ ಅ. ೦೭ ಬುಧವಾರ ಆಯೋಜಿಸಿದ್ದ ಸರ್ಕಾರದ ಐಟಿಐ ತರಬೇತಿದಾರರಿಗೆ ಮಧ್ಯಾಹ್ನದ ಬಿಸಿ ಊಟ ವಿತರಣಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯುವಜನರು ದೇಶದ ಬೆನ್ನೆಲುಬು. ಐ.ಟಿ.ಐ. ತರಬೇತಿಯ ಮೂಲಕ ತಾಂತ್ರಿಕ ಕೌಶಲ್ಯ ಪಡೆದುಕೊಳ್ಳುತ್ತಿರುವ ನಮ್ಮ ಯುವಕ-ಯುವತಿಯರು ಹಸಿವಿನ ಚಿಂತನೆಯಿಲ್ಲದೆ, ಏಕಾಗ್ರತೆಯಿಂದ ತಮ್ಮ ವಿದ್ಯಾಭ್ಯಾಸ ಮತ್ತು ತರಬೇತಿಯಲ್ಲಿ ತೊಡಗಿಕೊಳ್ಳಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ. ಉತ್ತಮ ಆರೋಗ್ಯವಿದ್ದರೆ ಮಾತ್ರ ಉತ್ತಮ ಜ್ಞಾನ ಮತ್ತು ಕೌಶಲ್ಯವನ್ನು ಗಳಿಸಲು ಸಾಧ್ಯ ಎಂದರು.
ಕೈಗಾರಿಕೋದ್ಯಮಿ ಹೆಚ್. ಜಿ. ಚಂದ್ರಶೇಖರ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ವೃತ್ತಿಪರ ತರಬೇತಿಯನ್ನು ಪರಿಪೂರ್ಣವಾಗಿ ಕಲಿತು, ಕೌಶಲ್ಯಪೂರ್ಣ ತಂತ್ರಜ್ಞರಾಗಿ ಹೊರಹೊಮ್ಮಬೇಕು. ದೇಶದ ಕೈಗಾರಿಕಾ ರಂಗಕ್ಕೆ ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಒದಗಿಸುವಲ್ಲಿ ಐ.ಟಿ.ಐ. ಕಾಲೇಜುಗಳ ಪಾತ್ರ ಹಿರಿದಾದದ್ದು. ಈ ಬಿಸಿಊಟ ಯೋಜನೆಯು ನಿಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿ, ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ದಾರಿದೀಪವಾಗಲಿದೆ ಎಂದರು.
ವಿಶ್ರಾಂತ ಕುಲಪತಿಗಾಳದ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯಿಂದ, ದೂರದೂರುಗಳಿಂದ ಇಲ್ಲಿಗೆ ತರಬೇತಿ ಪಡೆಯಲು ಬರುತ್ತಾರೆ. ಬಡತನ ಅಥವಾ ಹೊಟ್ಟೆಪಾಡಿನ ಚಿಂತೆಯಿAದ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಮೇಲಿನ ಗಮನವನ್ನು ಕಳೆದುಕೊಳ್ಳಬಾರದು ಎಂಬುದು ನಮ್ಮ ಆಶಯ. ಮಧ್ಯಾಹ್ನದ ಪೌಷ್ಟಿಕಯುಕ್ತ ಬಿಸಿಊಟವು ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ತರಗತಿಗಳಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸಲು ಪ್ರೇರೇಪಿಸುತ್ತದೆ ಎಂದರು.
ತುಮಕೂರಿನ ಹಿರಿಯ ಪತ್ರಿಕೋದ್ಯಮಿ ಡಾ. ಎಸ್. ನಾಗಣ್ಣ ಅವರು ಮಾತನಾಡಿ ತುಮಕೂರು ಸರ್ಕಾರಿ ಐಟಿಐ ಕಾಲೇಜು ನಮ್ಮ ರಾಜ್ಯದಲ್ಲೇ ಅತ್ಯುತ್ತಮ ಮಾದರಿ ಕಾಲೇಜು ಆಗಿ ಬೆಳೆಯುತ್ತದೆ. ಇದಕ್ಕೆ ಕಾರಣ ಇಲ್ಲಿನ ವಿದ್ಯಾರ್ಥಿಗಳ ಪರಿಶ್ರಮ, ಬೋಧಕ ವರ್ಗದವರ ಮಾರ್ಗದರ್ಶನ ಮತ್ತು ಸಮಾಜದ ವಿವಿಧ ದಾನಿ ಸಂಸ್ಥೆಗಳ ಕೈಜೋಡಿಸುವಿಕೆ. ಇಲ್ಲಿ ಸಿಗುತ್ತಿರುವ ಅತ್ಯುತ್ತಮ ತಾಂತ್ರಿಕ ತರಬೇತಿಯ ಜೊತೆಗೆ, ಈಗ ಲಭ್ಯವಾಗಿರುವ ಪೌಷ್ಟಿಕ ಮಧ್ಯಾಹ್ನದ ಊಟದ ಸೌಲಭ್ಯವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಶಿಸ್ತು ಮತ್ತು ಪರಿಶ್ರಮದಿಂದ ಓದಿ, ತುಮಕೂರು ಸರ್ಕಾರಿ ಐಟಿಐ ಕಾಲೇಜಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಳ್ಳಬೇಕು ಎಂದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ವೈಜಗೊಂಡ, ತುಮಕೂರು ವಿವಿ ಕುಲಪತಿಗಳಾದ ಪ್ರೊ. ನಾಗಭೂಷಣ್ ಹೆಚ್., ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ , ರೈಸ್ ಇಂಡಸ್ಟಿçÃಸ್ ಮಾಲೀಕರಾದ ರಮೇಶ್ ಬಾಬು ಆರ್.ಎಲ್., ಐ ಎಂ ಸಿ ಅಧ್ಯಕ್ಷರಾದ ರಮೇಶ್ ಟಿ. ಕೆ., ತುಮಕೂರು ಸರ್ಕಾರಿ ಐಟಿಐ ಪ್ರಾಚಾರ್ಯರಾದ ಕಿರಣ್ ಕುಮಾರ್ ಟಿ. ಆರ್. ಉಪಸ್ಥಿತರಿದ್ದರು.
(Visited 1 times, 1 visits today)





