ತುಮಕೂರು: ಪ್ರಕೃತಿ, ಪರಿಸ್ಥಿತಿ ನಮ್ಮ ವಿರುದ್ಧ ನಿಂತಾಗಲೂ ಧೈರ್ಯದಿಂದ ಹೋರಾಡಿ ಗೆಲ್ಲುವುದೇ ನಿಜವಾದ ಯಶಸ್ಸು. ಸಾಧನೆ ಮಾಡಲು ದೊಡ್ಡ ನಗರ, ಶ್ರೀಮಂತ ಕುಟುಂಬದಲ್ಲಿ ಹುಟ್ಟಬೇಕೆಂದೇನಿಲ್ಲ. ಸಾಧನೆ ಮಾಡುವ ಕಿಚ್ಚು, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನವಿದ್ದರೆ ಸಾಕು ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ. ಅನುರಾಧ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ಸ್ನಾತಕೋತ್ತರ ವಿಭಾಗಗಳ ಸಹಯೋಗದಲ್ಲಿ ಅ. ೦೭ ಬುಧವಾರ ದಂದು ಆಯೋಜಿಸಲಾಗಿದ್ದ ೨೦೨೬-೨೭ನೇ ಸಾಲಿನ ಪ್ರೇರಣಾ ಉಪನ್ಯಾಸ – ೦೨: ಹೋರಾಟವಿಲ್ಲದೆ ಯಾವುದೇ ನಿಜವಾದ ಯಶಸ್ಸು ಇಲ್ಲ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಫ್ರೆಂಚ್ ಕ್ರಾಂತಿ, ವರ್ಣಭೇದದ ವಿರುದ್ಧ ನೆಲ್ಸನ್ ಮಂಡೇಲಾ ಅವರ ಹೋರಾಟ, ಗುಲಾಮಗಿರಿಯ ನಿರ್ಮೂಲನೆಗಾಗಿ ಅಬ್ರಹಾಂ ಲಿಂಕನ್ ಅವರ ಪ್ರಯತ್ನ ಹಾಗೂ ನೆಪೋಲಿಯನ್ ಬೋನಪಾರ್ಟೆಯ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಇತಿಹಾಸದಲ್ಲಿ ಮಹತ್ತರ ಸಾಧನೆ ಮಾಡಿದವರ ಹಿಂದೆ ಕಠಿಣ ಹೋರಾಟ, ಧೈರ್ಯ ಮತ್ತು ದೃಢಸಂಕಲ್ಪವಿತ್ತು ಎಂದರು.
ಚಿಕ್ಕ ವಯಸ್ಸು, ಸೀಮಿತ ಸಂಪನ್ಮೂಲಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ. ಹೋರಾಟದ ಮನೋಭಾವ, ಗುರಿಯ ಮೇಲಿನ ನಂಬಿಕೆ ಮತ್ತು ಧೈರ್ಯ, ಎದುರಿಸುವ ಛಲವಿದ್ದರೆ ಯಶಸ್ಸು ಸಾಧ್ಯ ಎಂದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಜೀ ಮಹಾರಾಜ್ ಅವರು ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕೆ ಒತ್ತು ನೀಡಬೇಕು. ದುಶ್ಚಟಗಳು ಹಾಗೂ ಅಡ್ಡದಾರಿಗಳಿಂದ ದೂರವಿದ್ದು, ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಬೇಕು. ಶೌರ್ಯದಿಂದ ಹೋರಾಡಿ ಸಾಧನೆ ಮಾಡಿದ ಧೀಮಂತ ನಾಯಕರ ಜೀವನದಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದರು.
ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ ಎಚ್.ಎಸ್. ಮಾತನಾಡಿ, ಇಂತಹ ಪ್ರೇರಣಾದಾಯಕ ಉಪನ್ಯಾಸಗಳನ್ನು ಆಲಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಅಧ್ಯಯನದ ಹಸಿವು ಇರಬೇಕು. ತುಮಕೂರು ವಿಶ್ವವಿದ್ಯಾಲಯ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗಭೂಷಣ್ ಎಚ್.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ. ಕರಿಯಣ್ಣ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ಜ್ಯೋತಿ ಅವರು ನಿರೂಪಿಸಿದರು. ಪ್ರೇರಣಾ ಉಪನ್ಯಾಸ ಸಮಿತಿ ಸಂಚಾಲಕರಾದ ಡಾ. ವನಜಾಕ್ಷಿ, ಗ್ರಂಥಾಲಯದ ಉಪಗ್ರಂಥಪಾಲಕರಾದ ಡಾ. ಕುಮಾರ ಬಿ. ಇದ್ದರು.
(Visited 1 times, 1 visits today)





