ಹುಳಿಯಾರು:

      ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಹುಳಿಯಾರು ಎಪಿಎಂಸಿಯಲ್ಲಿ ತೆರೆಯಲಾಗಿದ್ದ ಕಛೇರಿ ಬೀಗ ಜಡಿದು ವಾರಗಳಾಗಿದ್ದು ಹೆಸರು ನೋಂದಣಿಗೆ ಬರುವ ರೈತರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತ್ತಾಗಿದ್ದು ನಿತ್ಯ ರೈತರು ಅಲೆಯುವುದು ಮಾತ್ರ ತಪ್ಪಿಲ್ಲ.

      ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ರೈತರ ನೆರವಿಗಾಗಿ ಧಾವಿಸಿರುವ ಸರ್ಕಾರ ಕ್ವಿಂಟಲ್ ರಾಗಿಗೆ 3295 ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ನಿರ್ಧರಿಸಿತ್ತು. ಪರಿಣಾಮ ಹುಳಿಯಾರು ಎಪಿಎಂಸಿಯಲ್ಲಿ ರೈತರ ನೋಂದಣಿಗಾಗಿ ಕಛೇರಿಯನ್ನೂ ತೆರದು ನೋಂದಣಿಗೆ ಸಿಬ್ಬಂದಿಯನ್ನೂ ಸಹ ನೇಮಿಸಿತ್ತು. ಆದರೆ ಡಿ.28 ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದ ಜಿಲ್ಲಾಡಳಿತ ವಾರ ಕಳೆದರೂ ಹುಳಿಯಾರಿನಲ್ಲಿ ಮಾತ್ರ ಇನ್ನೂ ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ.

      ಜಿಲ್ಲಾಡಳಿತ ಮಾತು ನಂಬಿ ನೋಂದಣಿಗಾಗಿ ಕಳೆದ ವಾರ ಆಗಮಿಸಿದ್ದ ರೈತರಿಗೆ ಸೋಮವಾರದಿಂದ ನೋಂದಣಿ ಮಾಡಿಕೊಳ್ಳುವುದಾಗಿ ಹೇಳಿದ್ದ ಇಲ್ಲಿನ ಸಿಬ್ಬಂದಿ ಏಕಾಏಕಿ ಕಳೆದ ಶುಕ್ರವಾರ ಕಚೇರಿಗೆ ಬೀಗ ಜಡಿದು ಹೋದವರು ಇತ್ತ ತಿರುಗಿಯೂ ಸಹ ನೋಡಿಲ್ಲ. ಪರಿಣಾಮ ಹೆಸರು ನೊಂದಾಯಿಸಲು ಬರುವ ರೈತರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತ್ತಾಗಿದ್ದು ಎಪಿಎಂಸಿ ಸಿಬ್ಬಂದಿಗಳ ಕಡೆ ಮುಖಮಾಡಿದ್ದಾರೆ.

      ನಿತ್ಯ ಹೆಸರು ನೋಂದಾಯಿಸಲು ಆಗಮಿಸುವ ನೂರಕ್ಕೂ ಹೆಚ್ಚು ರೈತರು ಎಪಿಎಂಸಿ ಸಿಬ್ಬಂದಿಗಳನ್ನೇ ಹೆಸರು ನೋಂದಾಯಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಂದ ನಿತ್ಯವೂ ಬಂದೋಗುವುದು ಕಷ್ಟವಾಗುತ್ತಿದ್ದು ತಂದಿರುವ ದಾಖಲಾತಿಗಳನ್ನು ಪಡೆದು ಹೆಸರು ನೋಂದಾಯಿಸಿ ಅಥವಾ ಟೋಕನ್ ಆದರೂ ಕೊಡಿ ಎಂದು ಪೀಡಿಸುತ್ತಿದ್ದಾರೆ. ರೈತರ ಕಿರಿಕಿರಿ ತಾಳಲಾರದೆ ಪ್ರವೇಶ ದ್ವಾರದಲ್ಲಿ ರಾಗಿ ಖರೀಧಿ ಕೇಂದ್ರದವರ ಪೋನ್ ನಂಬರ್ ಅಂಟಿಸಿ ಪೋನ್ ಮಾಡಿ ಮಾಹಿತಿ ಪಡೆಯಿರಿ ಎನ್ನುತ್ತಿದ್ದಾರೆ.

      ಒಟ್ಟಾರೆ ನಿತ್ಯ ಎಪಿಎಂಸಿಗೆ ಹೆಸರು ನೋಂದಣಿಗೆ ಬರುವ ರೈತರಿಗೆ ನೋಂದಣಿ ಪ್ರಕ್ರಿಯೆ ಆರಂಭದ ಸ್ಪಷ್ಠ ಮಾಹಿತಿ ತಿಳಿಯದೆ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ರೈತರು ನಿತ್ಯ ಎಪಿಎಂಸಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ತಕ್ಷಣ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಿಖರವಾಗಿ ಎಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತದೆ. ಎಂದಿನಿಂದ ಖರೀಧಿ ಪ್ರಕ್ರಿಯೆ ಆರಂಭವಾಗುತ್ತದೆ ಎನ್ನುವ ಮಾಹಿತಿ ನೀಡಿ ರೈತರು ಅಲೆಯುವುದನ್ನು ತಪ್ಪಿಸಬೇಕಿದೆ.

(Visited 15 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp