ತುಮಕೂರು :

      ಸಕಾರದಿಂದ ಬಿಡುಗಡೆಯಾಗಿರುವ ಅನುದಾನದಡಿ ಕೈಗೆತ್ತಿಕೊಂಡು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ತಾಲ್ಲೂಕು ಪಂಚಾಯತಿ ಆಡಳಿತಾಧಿಕಾರಿ ಬಿ.ರಘು ತಿಳಿಸಿದರು.
ತಾಲ್ಲೂಕು ಪಂಚಾಯತಿಯಲ್ಲಿಂದು ನಡೆದ ಸಾಮಾನ್ಯ ಹಾಗೂ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ವಿವಿಧ ಇಲಾಖೆಯ ಪ್ರಗತಿ ವರದಿ ಪರಿಶೀಲಿಸಿ ತಾಲ್ಲೂಕಿನ ಎಲ್ಲಾ ಇಲಾಖೆಗಳು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಮುತ್ಸಂದ್ರ, ಗೌಡಿಹಳ್ಳಿ, ಅದಲಾಪುರ, ಹಾಲನೂರು ಗ್ರಾಮಗಳಲ್ಲಿ ಪ್ರಗತಿಯಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
2021-22ನೇ ಸಾಲಿನ ಫೆಬ್ರುವರಿ ಮಾಹೆಯಲ್ಲಿ ಸಾಧಿಸಿರುವ ವರದಿಯ ಪ್ರಕಾರ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ 2 ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡಿದ್ದು, 3 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದರು.
ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ಹಾಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರ(ಕೋರ ಹೋಬಳಿ)ದಲ್ಲಿ 3 ಹೆಕ್ಟೇರ್‍ಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಬಿಪಿಎಲ್ ಪಡಿತರ ಚೀಟಿದಾರರ ಪಡಿತರ ಚೀಟಿಯನ್ನು ಎನ್.ಪಿ.ಹೆಚ್.ಹೆಚ್.(ಆದ್ಯತೇತರ) ಪಡಿತರ ಚೀಟಿಯನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಂಜೂರಾಗಿರುವ 12 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ತುಮಕೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿ ಜಯಪಾಲ್ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 6 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp