
ಮಧುಗಿರಿ: ಪ್ರತಿ ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ ೩೦೦ ಮೊಟ್ಟೆ ಜಾಕಿ ಕಟ್ಟಿ ೨೫೦ ಕೆಜಿ ರೇಷ್ಮೆ ಗೂಡು ಬೆಳೆಯಬಹುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಶ್ರೀ ಲಕ್ಷ್ಮೀ ನರಸಯ್ಯ ತಿಳಿಸಿದರು.
ತಾಲೂಕಿನ ರಂಟವಳಲು ಗ್ರಾಮದಲ್ಲಿ ರೇಷ್ಮೆ ಕೃಷಿ ಬೆಳಗಾರರ ಗುಂಪು ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿಪ್ಪು ನೇರಳೆ ಬೇಸಾಯದಲ್ಲಿ ಇಲಾಖೆಯಿಂದ ಶಿಫಾರಸ್ ಆಗಿರುವಂತಹ ಕೀಟನಾಶಕಗಳನ್ನು ಮಾತ್ರ ಬಳಸಬೇಕು ಎಂದು ತಿಳಿಸಿದರು. ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಮುನ್ನ, ಸದರಿ ಖಾಲಿ ನಿವೇಶನವನ್ನು ದಿಶಾಂಕ್ ಆಪ್ ಮೂಲಕ ಖಚಿತಪಡಿಸಿಕೊಂಡ ನಂತರ ಹುಳು ಮನೆ ನಿರ್ಮಾಣ ತಕ್ಕದ್ದು ಎಂದು ಹೇಳಿದರು.
ರೇಷ್ಮೆ ಇಲಾಖೆಯ ರೇಷ್ಮೆ ಸಹಾಯಕ ನಿರ್ದೇಶಕ ಮೋಹನ್ ಮಾತನಾಡಿ ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ಅಥವಾ ರೇಷ್ಮೆ ಕೃಷಿ ಕೈಗೊಂಡಿರುವ ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು, ಒಂದು ಎಕರೆ ಹಿಪ್ಪು ನೇರಳೆ ನಾಟಿ ಮಾಡುವುದಕ್ಕೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ೪೦೦೦೦ ಸಾವಿರದಿಂದ ೫೦೦೦೦ ಸಾವಿರದವರೆಗೆ ಸಹಾಯಧನವಿದೆ. ಹಿಪ್ಪು ನೇರಳೆ ತೋಟಕ್ಕೆ ಒಂದು ಎಕರೆ ವಿಸ್ತೀರ್ಣಕ್ಕೆ ಹನಿ ನೀರಾವರಿ ಅಳವಡಿಸಿಕೊಂಡರೆ ೩೫ ರಿಂದ ೪೦,೦೦೦ ರೂ. ಸಹಾಯಧನ ಲಭ್ಯವಿದೆ ಎಂದರು. ೧ ಸಾವಿರ ಚದುರ ಅಡಿ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಸಹಾಯಧನ ೩,೩೭, ೫೦೦ ಸಾಮಾನ್ಯ ವರ್ಗದ ರೈತರಿಗೆ. ಎಸ್ ಸಿ & ಎಸ್ ಟಿ ವರ್ಗದವರಿಗೆ ೪೦೫೦೦೦ ಸಹಾಯಧನ ಲಭ್ಯವಿದೆ ಎಂದರು. ರೇಷ್ಮೆ ಹುಳು ಸಾಕಾಣಿಕೆ ಸಲಕರಣೆಗಳಾದ ಪ್ಲಾಸ್ಟಿಕ್ ಚಂದ್ರಿಕೆ ಹಾಗೂ ಪವರ್ ಸ್ಪೆಯರ್. ಇತರೆ ವರ್ಗದವರಿಗೆ ಶೇಕಡ ೭೫ % ಸಬ್ಸಿಡಿ. ಎಸ್ಸಿ ಎಸ್ಟಿ ವರ್ಗದವರಿಗೆ ಶೇಕಡ ೯೦% ಸಬ್ಸಿಡಿ ಸಿಗಲಿದೆ ಎಂದು ಮಾಹಿತಿ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೇಷ್ಮೆ ಬೆಳೆಗಾರರಾದ ಶ್ರೀನಿವಾಸ್ ರವರು ಮಾತನಾಡಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಹಾಗೂ ತಾಂತ್ರಿಕ ಮಾಹಿತಿಯನ್ನು ಪಡೆಯುವುದರ ಮೂಲಕ ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂದು ತಿಳಿಸಿದರು. ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್ ರವರು ಮಾತನಾಡಿ ನೀರಾವರಿ ಸೌಲಭ್ಯ ಇರುವ ರೈತರು ರೇಷ್ಮೆ ಕೃಷಿ ಮಾಡುವುದರ ಮೂಲಕ ಎಲ್ಲಾ ಸೌಲಭ್ಯವನ್ನು ಇಲಾಖೆಯಿಂದ ಪಡೆಯಬಹುದು ಎಂದು ತಿಳಿಸಿದರು.



