ತುಮಕೂರು:


ಕಾಂಗ್ರೆಸ್‍ನಲ್ಲಿ ಅಸಮಾಧಾನ ಸೋಟಗೊಂಡಿದೆ. ಮಾಜಿ ಶಾಸಕ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎಂ.ಡಿ. ಲಕ್ಷ್ಮೀನಾರಾಯಣ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಧಾನ ಹೊರ ಹಾಕಿದ್ದಾರೆ.
ವಿಧಾನಪರಿಷತ್ ಸದಸ್ಯ ಸ್ಥಾನ ಸಿಗದ ಕಾರಣಕ್ಕೆ ಮಾಜಿ ಸಚಿವ ಎಂ.ಆರ್.ಸೀತಾರಾಂ ಇತ್ತೀಚೆಗಷ್ಟೆ ಬೆಂಬಲಿಗರ ಸಭೆ ನಡೆಸಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಅದರ ಬೆನ್ನಲ್ಲೆ ಎಂ.ಡಿ.ಲಕ್ಷ್ಮೀನಾರಾಯಣ ಕೂಡ ವಿಧಾನ ಪರಿಷತ್ ಸ್ಥಾನ ಸಿಗದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದು ಪಕ್ಷ ತೊರೆಯುವ ಸಿದ್ಧತೆಯಲ್ಲಿದ್ದಾರೆ. ನನ್ನಹುಟ್ಟುಹಬಕ್ಕೆ ಬಂದು ನೀವು ಮಾತು ಕೊಟ್ಟಿದ್ದೇನು? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
ನಾನು ತುರುವೇಕೆರೆ ಕ್ಷೇತ್ರದ ಟಿಕೆಟ್ ಬಯಸಿದ್ದೆ, ನೀವೇ ನನ್ನನ್ನ ಸಮಾಧಾನ ಪಡಿಸಿದ್ದಿರಿ. ಕಾಂತರಾಜುಗೆ ತುರುವೇಕೆರೆ ಟಿಕೆಟ್ ನೀಡುವ ಭರವಸೆ ನೀಡಿದ್ದೇನೆ. ನೀವು ಪಕ್ಷದ ಸಂಘಟನೆಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಾ. ನಿಮ್ಮನ್ನು ವಿಧಾನ ಪರಿಷತ್ ಸದಸ್ಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಡಿ.ಕೆ.ಶಿವಕುಮಾರ್ ಕೂಡ ಇದೇ ಭರವಸೆ ನೀಡಿದ್ದರು.
ಈಗ ಇಬ್ಬರು ಕೊಟ್ಟ ಮಾತನ್ನು ಮರೆತು ಬಿಟ್ಟಿದ್ದಾರೆ. ಇದು ನಿಮಗೆ ಒಪ್ಪುತ್ತಾ ಎಂದು ಲಕ್ಷ್ಮೀನಾರಾಯಣ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಬಿಜೆಪಿ ಬಿಟ್ಟು ಬಂದ ಬಳಿಕ ಹಲವಾರು ವರ್ಷಗಳಿಂದ ಮನೆ ಮಠ ತೊರೆದು ರಾತ್ರಿ ಹಗಲೆನ್ನದೆ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಂಘಟನೆ ಮಾಡಿದ ನಾನು ಈ ಘೋರ ಆನ್ಯಾಯ ಸಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ತುಮಕೂರು ಸಭೆ ಮುಗಿಸಿ ದಾಬಸ್ ಪೇಟೆ ಹತ್ತಿರ ಕಾಂತರಾಜು, ಗುಬ್ಬಿ ಶ್ರೀನಿವಾಸ್, ಮನೋಹರ್ ಜೊತೆ ಮಧ್ಯಾಹ್ನ ಊಟ ಮಾಡುವಾಗ. ತುರುವೇಕೆರೆಗೆ ಕಾಂತರಾಜು, ಗುಬ್ಬಿಗೆ ಶ್ರೀನಿವಾಸ್, ತಿಪಟೂರಿಗೆ ಷಡಾಕ್ಷರಿಯವರಿಗೆ ಸೀಟು ಕೊಡುತ್ತೇವೆ. ನಿಮ್ಮ ಸಂಘಟನೆ ರಾಜ್ಯಾದ್ಯಂತ ತುಂಬಾ ಒಳ್ಳೆಯ ಮಾಹಿತಿ ಬರುತ್ತಿದೆ. ಆದ್ದರಿಂದ ನಿಮ್ಮನ್ನು ಎಂ.ಎಲ್.ಸಿ ಮಾಡುತ್ತೇವೆ ಎಂದಿದ್ದರು. ದೆಹಲಿಯಲ್ಲಿ ನಿಮ್ಮಿಬ್ಬರ ಮಧ್ಯೆ ಇಡೀ ದಿವಸ ನಡೆಸಿದ ಗುದ್ದಾಟವೇನು? ಪಕ್ಷದ ಸಂಘಟನೆ ಬಗ್ಗೆ ಗುದ್ದಾಟ ಮಾಡಿ ಬರೀಗೈಯಲ್ಲಿ ವಾಪಾಸು ಬರಲು ಕಾರಣವೇನು? ಹೈಕಮಾಂಡ್ ನೀವಿಬ್ಬರೂ ಕೊಟ್ಟ ಹೆಸರುಗಳನ್ನು ಸಾರಾಸಗಟಾಗಿ ತಿರಸ್ಕಾರ ಮಾಡಲು ಕಾರಣವೇನು? ನಂತರ ತಾವೊಬ್ಬರೆ ದೆಹಲಿಗೆ 22 ರಾತ್ರಿ ಹೋಗಿ 23 ರಂದು ಇಡೀ ದಿವಸ ಸುಮ್ಮನಿದ್ದು, ಸಂಜೆ ಯಾರ ಒತ್ತಡಕ್ಕೆ ಮಣಿದು ಹೆಸರು ಬದಲಾವಣೆ ಮಾಡಿ ದೆಹಲಿ ಏರ್‍ಪೋರ್ಟ್ ನಿಂದ ನನಗೆ ದೂರವಾಣಿ ಮಾಡಿ ಹೇಳಿದ ಮಾತೇನು ? ಎಂದು ಪ್ರಶ್ನಿಸಿದ್ದಾರೆ.
ನಾನು ಮುಕ್ತವಾಗಿ ವಿಷಯ ತಿಳಿಸಿರುವೆ ಇನ್ನೂ ಬೇಕಾದಲ್ಲಿ ಅಗಸ್ಟ್‍ನಲ್ಲಿ ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ಸಾರ್ವಜನಿಕರಿಗೆ ಕೆಲವು ವಿಷಯ ಬಹಿರಂಗ ಪಡಿಸುವೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಕೆಟ್ಟ ನಡವಳಿಕೆಯ ಕಾಂಗ್ರೆಸ್ ಪಕ್ಷದ ನಾಯಕತ್ವ ನೋಡಿರಲಿಲ್ಲ. ನಿಮ್ಮಿಬ್ಬರ ಕುರ್ಚಿಯ ಕಚ್ಚಾಟದಿಂದ ಕಾರ್ಯಕರ್ತರು ಬಲಿಪಶುವಾಗಲಿದ್ದಾರೆ. ದೇವರು ನಿಮ್ಮನ್ನು ಚನ್ನಾಗಿಡಲೆಂದು ಆಶಿಸುತ್ತೇನೆ. ಧನ್ಯವಾದಗಳು ಎಂದು ಪತ್ರ ಮುಗಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಲಕ್ಷ್ಮೀನಾರಾಯಣ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡ್ತಾರೆ. ಈ ಇಬ್ಬರನ್ನು ಕರೆದು ಹೈಕಮಾಂಡ್ ಬುದ್ಧಿ ಹೇಳಬೇಕು. ಇಲ್ಲದೆ ಹೋದರೆ ಕಾರ್ಯಕರ್ತರು ನಿರಾಶರಾಗುತ್ತಾರೆ. ರಾಜ್ಯದಲ್ಲಿ ಏನೂ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಿರಿಯ ನಾಯಕರನ್ನಮೂಲೆಗುಂಪು ಮಾಡಲಾಗುತ್ತಿದೆ. ಪಕ್ಷ ಕಟ್ಟಿದವರನ್ನ ನೇಪಥ್ಯಕ್ಕೆ ಸರಿಸಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂಬ ಎರಡು ಗುಂಪುಗಳಿವೆ. ನಾನು ಸುಮಾರು 70 ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿ ಒಂದು ಬಣ ಸಿದ್ದರಾಮಯ್ಯನ ಪರವಿದ್ದರೆ, ಇನ್ನೊಂದು ಬಣ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎನ್ನುತ್ತಿದೆ. ಎಷ್ಟೆ ಹೇಳಿದರು ಕಾರ್ಯಕರ್ತರು ಹೊಂದಿಕೊಳ್ಳಲು ತಯಾರಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಈವರೆಗೆ ದಲಿತ ಸಿಎಂ ಮಾಡಿಲ್ಲ. ಇಬ್ಬರನ್ನ ಬಿಟ್ಟು ಪರಮೇಶ್ವರ್ ಸಿಎಂ ಮಾಡಬೇಕು. ಪರಮೇಶ್ವರ್ ದಲಿತ ಸಮುದಾಯದ ನಾಯಕ, ಜೊತೆಗೆ ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿದವರು ಎಂದು ಹೇಳುವ ಮೂಲಕ ಅಸಮಧಾನಕ್ಕೆ ಸೋಟಕ ತಿರುವು ನೀಡಿದ್ದಾರೆ.

(Visited 27 times, 1 visits today)
FacebookTwitterInstagramFacebook MessengerEmailSMSTelegramWhatsapp