ತುರುವೇಕೆರೆ


ಒಳ್ಳೆಯ ಕೆಲಸಗಳ ಮೂಲಕ ಪರಮಾನಂದ ಕಡೆಗೆ ಹೋಗುವುದೇ ಸಂಸ್ಕಾರ. ಸಂಸ್ಕಾರ ನಮ್ಮ ವ್ಯಕ್ತಿತ್ವದ ದೋಷ ನಿವಾರಣೆ ಮಾಡಿ ಗುಣದಾನದೊಂದಿಗೆ ಶಕ್ತಿವರ್ಧನೆ ಮಾಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಚಿಂತಕ ಡಾ. ಸಂತೋಷ್ ಹಾನಗಲ್ ತಿಳಿಸಿದರು.
ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ಶತವಧಾನಿ ಆರ್. ಗಣೇಶ್ ಅವರು ರಚಿಸಿದ ‘ಸಂಸ್ಕಾರಗಳು’ ಕೃತಿಯ ವಿಶ್ಲೇಷಣೆ ಮಾಡಿ ಅವರು ಮಾತನಾಡಿದರು.
ಸಂಸ್ಕಾರದಿಂದ ಸಮಾಜದ ಸದಸ್ಯರು ಸಂಘಟಿತರಾಗುತ್ತಾರೆ. ಹೃದಯದ ಶ್ರದ್ಧೆ ಮತ್ತು ವಿಶ್ವಾಸ ಬಲಿಯುತ್ತದೆ. ಕಲೆ, ಸಾಹಿತ್ಯದ ಸಂವೇದನೆ ಅರಳುತ್ತದೆ.ವೈವಿಧ್ಯಮಯ ಆಚರಣೆಗಳನ್ನು ಸಮಾನ ದೃಷ್ಟಿಯಿಂದ ನೋಡುವ ಮೂಲಕ ಪ್ರಜ್ಞಾವಂತಿಕೆ ಬೆಳೆಯುತ್ತದೆ.ಸಂಸ್ಕಾರವುಳ್ಳ ವ್ಯಕ್ತಿಗಳು ಒಂದು ಸುಸಂಸ್ಕøತ ಸಮುದಾಯವನ್ನು ನಿರ್ಮಿಸುತ್ತಾರೆ ಎಂದರು
ಕೃತಿಯಲ್ಲಿನ ಹಲವು ಸಂಕೀರ್ಣ ವಿಷಯಗಳನ್ನು ಅರ್ಥೈಸಿದ ಅವರು ವರ್ಣ ವ್ಯವಸ್ಥೆ ಎಂದರೆ ಚರ್ಮದ ಬಣ್ಣ, ಕಸುಬಿನ ಮೂಲಕ ಮನುಷ್ಯನನ್ನು ಪ್ರತ್ಯೇಕಿಸುವುದಲ್ಲ. ಸ್ವಧರ್ಮ ಗುರುತಿಸಿಕೊಂಡು ವ್ಯಕ್ತಿತ್ವ ಗಟ್ಟಿಮಾಡಿಕೊಳ್ಳುವುದೇ ವರ್ಣ ವ್ಯವಸ್ಥೆ ಎನಿಸಿಕೊಳ್ಳುತ್ತದೆ. ಅಂತೆಯೇ ಆತ್ಮಗುಣಗಳಿಗೂ, ಮಾನವ ಮೌಲ್ಯಗಳಿಗೂ ನೇರ ಸಂಬಂಧವಿಲ್ಲ. ಅದು ಮತಕೋಲಾಹಲ ಎಂದು ಆಕ್ಷೇಪಿಸಲ್ಪಟ್ಟಿದೆ ಎಂದು ಹಲವು ಧರ್ಮಸೂಕ್ಷ್ಮ ಸಂಗತಿಗಳನ್ನು ವಿವರಿಸಿದರು.
ಶ್ರಿ ಸಂತೋಷ್ ಹಾನಗಲ್ ಅವರಿಗೆ ಗ್ರಂಥಾಲಯದ ವತಿಯಿಂದ ಹಾಗೂ ವಿವಿಧ ನಾಗರಿಕ ಸಂಘ, ಸಂಸ್ಥೆಗಳ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ನಾಗರಾಜ್, ಸಂಸ್ಕಾರ ಭಾರತೀ ತಾಲ್ಲೂಕು ಘಟಕದ ಅಧ್ಯಕ್ಷೆ ಉಷಾ ಶ್ರೀನಿವಾಸ್, ಸುರಭಿ ಸಂಗಮದ ಟ್ರಸ್ಟೀ ನಾಗರತ್ನಮ್ಮ, ಶಾಂತಾ. ಎನ್.ಸ್ವಾಮಿ, ಆನಂದರಾಜ್, ಮಂಜುನಾಥ್, ರೊಟೇರಿಯನ್‍ಗಳಾದ ಟಿ.ಎಸ್.ಪ್ರಕಾಶ್‍ಗುಪ್ತಾ, ಅರಳೀಕರೆ ಲೋಕೇಶ್, ಪ್ರಭುಸ್ವಾಮಿ, ಶಿವರಾಜ್, ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಗೀತಾ ಸುರೇಶ್, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.ಸಂಸ್ಥಾಪಕ ಟಿ.ರಾಮಚಂದ್ರ ಸ್ವಾಗತಿಸಿದರು. ಕೃಷ್ಣಚೈತನ್ಯ ನಿರೂಪಿಸಿದರು.

(Visited 2 times, 1 visits today)