ತುಮಕೂರು


ಕಲ್ಪತರುನಾಡಿನಲ್ಲಿ ಬಿಟ್ಟೂ ಬಿಡದೆ ಧಾರಕಾರವಾಗಿ ಸುರಿಯುತ್ತಿರುವ ರಣ ರಕ್ಕಸ ವರುಣನ ರಣಾರ್ಭಟ ಅವಾಂತರಗಳನ್ನು ಸೃಷ್ಠಿಸಿದ್ದು, ಪೂನಾ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-48 ಸಂಪೂರ್ಣ ಮುಳುಗಡೆಯಾಗಿ ಈ ರಸ್ತೆಯಲ್ಲಿ ನದಿಯಂತೆ ನೀರು ಹರಿದಿದೆ.
ರಾತ್ರಿ ಸುರಿದ ರಣಚಂಡಿ ಮಳೆಗೆ ಹೆಬ್ಬಾಕ ಅಮಾನಿಕೆರೆ ಒಳ ಮತ್ತು ಹೊರ ಹರಿವು ಜಾಸ್ತಿಯಾಗಿ ರಾಷ್ಟ್ರೀಯ ಹೆದ್ದಾರಿ-40 ಹಾಗೂ ಅಂಚಿಹಳ್ಳಿ ಗ್ರಾಮ ಜಲಾವೃತವಾಗಿದೆ.
ರಣರಕ್ಕಸ ಮಳೆಯಿಂದಾಗಿ ಊರುಕೆರೆ ಮತ್ತು ಕೋರ ನಡುವೆ ರಾಷ್ಟ್ರೀಯ ಹೆದ್ದಾರಿ-48 ಸಂಪೂರ್ಣ ಜಲಾವೃತಗೊಂಡಿರುವುದರಿಂದ ಸುಮಾರು 4 ಕಿಲೋ ಮೀಟರ್ ವರೆಗೆ ಮಳೆ ನೀರು ತುಂಬಿ ವಾಹನಗಳು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೆಬ್ಬಾಕ ಮತ್ತು ಅಂಚಿಹಳ್ಳಿ ಗ್ರಾಮದ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೊರಗೆ ಹೋಗಲು ಸಾಧ್ಯವಾಗದೆ ನೀರಿನ ಅಬ್ಬರಕ್ಕೆ ತತ್ತರಿಸುವಂತಾಗಿದೆ.
ಹೆಬ್ಬಾಕ ಅಮಾನಿಕೆರೆ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಹೆಬ್ಬಾಕ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾಮಸ್ಥರಿಗೆ ಜಲದಿಗ್ಬಂಧನ
ಹೆಬ್ಬಾಕ ಅಮಾನಿಕೆರೆ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಹೆಬ್ಬಾಕ ಮತ್ತು ಊರುಕೆರೆ ನಡುವೆ ಸಂಪರ್ಕ ಕಡಿತಗೊಂಡಿದೆ.
ಇತ್ತ ಹೆಬ್ಬಾಕ ಗ್ರಾಮದ ಆಂಜನೇಯ ದೇಗುಲ, ಕೆರೆ ಅಂಚಿನ ಮನೆಗಳು ಮುಳುಗಡೆಯಾಗಿವೆ. ಅಲ್ಲದೆ ಹೆಬ್ಬಾಕ, ನರಸಾಪುರ, ಊರುಕೆರೆ, ಕಟ್ಟಿಗೇನಹಳ್ಳಿ ಭಾಗದ ಬಹುತೇಕ ಅಡಿಕೆ, ತೆಂಗು ತೋಟಗಳು ಜಲಾವೃತಗೊಂಡಿವೆ.
ಡಿಸಿ ಭೇಟಿ
ಹೆಬ್ಬಾಕ ಕೆರೆಯ ಕೋಡಿ ಪಕ್ಕದಲ್ಲಿ ಸ್ವಲ್ಪ ಒಡೆದು ಹೆಚ್ಚಿನ ನೀರು ಹೊರಗೆ ಬಿಡಲಾಗಿದೆ. ಆದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಗಡೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಮುಂದೆ ಬರುವ ಗ್ರಾಮಗಳ ತೋಟಗಳು ಹಾಗೂ ಊರುಗಳು ಜಲಾವೃತಗೊಳ್ಳುವ ಭೀತಿ ಇದೆ ಎಂದರು.
ಸ್ಥಳೀಯರು ಹೇಳುವ ಪ್ರಕಾರ ಕೆರೆ ಕೋಡಿ ಎತ್ತರ ಮಾಡಿರುವುದು ನಿಜ. ಕೋಡಿ ಎತ್ತರ ಮಾಡಿರುವುದರಿಂದ ಈ ಸಮಸ್ಯೆಯಾಗಿರುವುದನ್ನು ತಾಂತ್ರಿಕವಾಗಿ ಪರಿಶೀಲಿಸಿದಾಗ ಕಂಡು ಬಂದರೆ ಸಂಬಂಧಪಟ್ಟ ಇಲಾಖೆಗಳಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಈಗಾಗಲೇ ತಾಲ್ಲೂಕು ಆಡಳಿತಗಳನ್ನು ಸಂಪೂರ್ಣವಾಗಿ ಸಜ್ಜು ಮಾಡಲಾಗಿದ್ದು, ಆಯಾ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ನಾಗರಿಕರ ಸಹಕಾರವೂ ಅಷ್ಟೇ ಮುಖ್ಯವಾಗಿದೆ. ಹಾಗಾಗಿ ನಾಗರಿಕರು ಸಹ ಅಷ್ಟೇ ಕಾಳಜಿಯಿಂದ ಇರಬೇಕು ಎಂದರು.
ಪಾಲಿಕೆ ಆಯುಕ್ತರ ಭೇಟಿ
ಹೆಬ್ಬಾಕ ಅಮಾನಿಕೆರೆ ನೀರಿನ ಹೊರ ಹರಿವು ಜಾಸ್ತಿಯಾಗಿ ಅಂಚಿಹಳ್ಳಿ ಗ್ರಾಮ ಮುಳುಗಡೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರು ಬೆಳಿಗ್ಗೆಯೇ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಭೇಟಿ
ಜಲಾವೃತಗೊಂಡಿರುವ ಅಂಚಿಹಳ್ಳಿ ಗ್ರಾಮಕ್ಕೆ ಉಪವಿಭಾಗಾಧಿಕಾರಿ ಅಜಯ್, ಅಡಿಷನಲ್ ಎಸ್ಪಿ ಉದೇಶ್ ಹಾಗೂ ತಹಶೀಲ್ದಾರ್ ಮೋಹನ್‍ಕುಮಾರ್, ಆರ್.ಐ.ಗಳಾದ ಶಿವಣ್ಣ, ಮಹೇಶ್, ಅಜಯ್, ಗೋಪಿನಾಥ್ ಗ್ರಾಮ ಲೆಕ್ಕಿಗರಾದ ದೇವರಾಜು, ಸುನಿತಾ, ರವಿಕುಮಾರ್, ರಾಘವೇಂದ್ರ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

(Visited 2 times, 1 visits today)
FacebookTwitterInstagramFacebook MessengerEmailSMSTelegramWhatsapp