
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಕೆಲವೆಡೆ ಬುಧವಾರ ರಾತ್ರಿ ಬೀಸಿದ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಮತ್ತು ಮರ ಗಿಡಗಳು ಧರೆಗುರುಳಿವೆ.
ನಿನ್ನೆ ಸಂಜೆ ತಾಲ್ಲೂಕಿನ ಅಲ್ಲಲ್ಲಿ ಕೆಲ ನಿಮಿಷಗಳ ವರೆಗೆ ಸೋನೆ ಮಳೆ ಬಂದರೆ; ಇನ್ನೂ ಕೆಲವೆಡೆ ರಸ್ತೆಯ ನೀರು ಹರಿಯುವಂತೆ ಮಳೆ ಬಿದ್ದಿರುವುದಾಗಿ ತಿಳಿದು ಬಂದಿದೆ.
ತಾಲ್ಲೂಕಿನ ಹೆಡಿಗೇಹಳ್ಳಿ, ಅರೆಮಲ್ಲೇನಹಳ್ಳಿ, ಹುಲಿಕಲ್ ನಾಲೆ, ಬೆಂಡೇಕೆರೆ, ಅಬುಕನಹಳ್ಳಿ, ಕಡೇಹಳ್ಳಿ, ತಂಗಡ, ಬ್ರಹ್ಮದೇವರಹಳ್ಳಿ, ಸೋಪ್ ನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತೆಂಗು ಹಾಗು ಇನ್ನಿತರ ಮರಗಳ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ಸುಮಾರು ೧೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗು ಲೈನ್ ಗಳು ತುಂಡರಿಸಿವೆ.
ಹುಲಿಕಲ್ ಹೇಮಾವತಿ ನಾಲೆ ಸಮೀಪ ಒಂದು ವಿದ್ಯುತ್ ಪರಿವರ್ತಕ ಬಿದ್ದು ಹಾಳಾಗಿದೆ. ಅದೇ ರೀತಿ ಬಡಗರಹಳ್ಳಿಯ ದೊಡ್ಡಯ್ಯ ಹಂದಿಜೋಗಿ ಕಾಲೋನಿಯ ನಿವಾಸಿ ಗಂಗಯ್ಯ ಅವರ ಮನೆಯ ಶೀಟು ಮತ್ತು ಹೆಂಚುಗಳು ಗಾಳಿಗೆ ತರಗೆಲೆಗಳಂತೆ ತೂರಿ ಹೋಗಿದ್ದು ಇದರಿಂದ ಮಳೆಯ ಹನಿಗೆ ಮನೆಯ ವಸ್ತುಗಳು ನೆನೆದು ಮನೆಯ ಮಾಲೀಕರು ಪರದಾಡುವಂತೆ ಆಗಿದೆ. ಸ್ಥಳಕ್ಕೆ ಬೆಸ್ಕಾಂ ಶಾಖಾಧಿಕಾರಿ ಎಂ.ಎಲ್.ಉಮೇಶ್ವರಯ್ಯ, ಸಿಬ್ಬಂದಿ ತೆರವು ಕಾರ್ಯಚರಣೆ ನಡೆದಿದ್ದಾರೆ. ಇದೇ ವೇಳೆ ಗ್ರಾಮ ಆಡಳಿತಾಧಿಕಾರಿ ಗುರುರಾಜ್ ಗತಾಟೆ ಇದ್ದರು.



