ತುರುವೇಕೆರೆ: ಕಾರ್ಮಿಕರಲ್ಲಿ ಸಂಘಟನೆ ಕೊರತೆಯಿದ್ದು ಕಾರ್ಮಿಕರು ಸಂಘಟಿತರಾದಾಗ ಮಾತ್ರ ಸಾಧನೆ ಮಾಡಲು ಸಾದ್ಯವಿದೆ ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು.
ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಶ್ರೀ ಮಂಜುನಾಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ ತುರುವೇಕೆರೆ, ಶ್ರಮಜೀವಿ ಕಟ್ಟಡ ಕಾರ್ಮಿಕರ ಹಿತರಕ್ಷಣಾ ಸಮಿತಿ ಕುಣಿಗಲ್, ಕರ್ನಾಟಕ ರಾಜ್ಯ ಕಟ್ಟಡ ಮಹಾತ್ಮಗಾಂಧಿ ನರೇಗಾ ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘ ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರು ಸಂಘಟಿತರಾಗದ ಹೊರತು ಸಂಘದ ಅಭಿವೃದ್ದಿ ಸಾದ್ಯವಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕೆಂದು ಕಿವಿಮಾತು ಹೇಳಿದರು.
ಶ್ರಮಜೀವಿ ಕಟ್ಟಡ ಕಾರ್ಮಿಕ ಹಿತರಕ್ಷಣಾ ಸಮಿತಿ ಕುಣಿಗಲ್ ಅಧ್ಯಕ್ಷರಾದ ಕೃಷ್ಣರಾಜ್ ಮಾತನಾಡಿ ನಿರ್ಧಿಷ್ಟ ಕಾನೂನುಗಳು ರೂಪಿತವಾಗುವ ಮುಂಚೆ ಕಾರ್ಮಿಕರಿಗೆ ಸೂಕ್ತ ನಿಯಮಗಳಿರಲಿಲ್ಲ. ಆ ವೇಳೆ ಕಾರ್ಮಿಕರು ಅನಾರೋಗ್ಯ ಇನ್ನಿತರ ತೊಂದರೆಗಳಿಗೆ ಒಳಗಾಗುತ್ತಿದ್ದರು. ಭಾರತದಲ್ಲಿ ೧೯೨೩ರ ನಂತರ ಅಧಿಕೃತವಾಗಿ ಕಾರ್ಮಿಕರಿಗೆ ವಿಶೇಷ ಸೌಲಭ್ಯಗಳು ಸಂವಿಧಾನದ ಮೂಲಕ ದಕ್ಕುತ್ತಾ ಹೋಯಿತು. ಇತ್ತೀಚೆಗೆ ನಕಲಿ ಕಾರ್ಮಿಕರೂ ಹೆಚ್ಚಿದ್ದು ಅಸಲಿ ಕಾರ್ಮಿಕರು ಮೊದಲು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಭಾದ್ಯತೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಕಾನೂನು ಸಲಹೆಗಾರ ಉಮೇಶ್ ಮಾತನಾಡಿ ಎಲ್ಲಾ ಶ್ರಮಿಕ ವರ್ಗದ ಕಾರ್ಮಿಕರು ಮೊದಲು ಸಂಘದ ಸದಸ್ಯತ್ವ ಪಡೆಯುವ ಮೂಲಕ ಸರ್ಕಾರದಿಂದ ತನಗೆ ಮತ್ತು ತಮ್ಮ ಕುಟುಂಬಕ್ಕೆ ಸಿಗಬಹುದಾದ ಅನುಕೂಲತೆಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬನ್ನಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕರಾದ ಬಸವರಾಜು, ಗೌರಮ್ಮ, ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ತಾಲ್ಲೂಕು ಅಧ್ಯಕ್ಷ ಆರ್.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತಸಂಘದ ತಾ.ಅಧ್ಯಕ್ಷ ಶ್ರೀನಿವಾಸ್ ಗೌಡ, ಸಿಐಟಿಯು ತಾ.ಅಧ್ಯಕ್ಷ ಡಿ.ಹೆಚ್.ಸತೀಶ್, ಕಾರ್ಮಿಕ ನಿರೀಕ್ಷಕ ಎಸ್.ಆರ್.ದಿನೇಶ್, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ, ಶಾಂತಮ್ಮ, ಕೆ.ಜೆ.ಮಂಜುನಾಥ್, ಈರಣ್ಣ, ಜಯಕುಮಾರ್ ಸೇರಿದಂತೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗು ಇತರರು ಇದ್ದರು. ತಿಪಟೂರು ರಸ್ತೆ, ಬಿರ್ಲಾ ಕಾರ್ನರ್, ಉಡುಸಲಮ್ಮ ದೇವಾಲಯ ಹಾಗೂ ಬಾಣಸಂದ್ರ ರಸ್ತೆ ಮಾರ್ಗವಾಗಿ ಮೆರವಣಿಗೆ ಮೂಲಕ ವೇದಿಕೆಗೆ ಬರಲಾಯಿತು. ಮಂಜುನಾಥ್ ಸ್ವಾಗತಿಸಿ, ಜ್ಯೋತಿ ನಿರೂಪಿಸಿ ತೀರ್ಥಕುಮಾರಿ ವಂದಿಸಿದರು.

(Visited 1 times, 1 visits today)