ತುಮಕೂರು: ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತವೆ, ಈ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪ ಯೋಗಪಡಿ ಸಿಕೊಳ್ಳಬೇಕು ಎಂದು ಸಾಹೇ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಕೆ.ಲಿಂಗೇಗೌಡ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿ ದ್ಯಾಲಯದ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯುವ ಕಲೋತ್ಸವ ೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲೋತ್ಸವ ಆರಂಭವಾಗಿ ೨೫ವರ್ಷಗಳು ಸಂದ ಸಂತಸದಲ್ಲಿ ಬೆಳ್ಳಿ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷಕ್ಕಿಂತ ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ಬಹುದೊಡ್ಡ ವೇದಿಕೆಯಾಗಿದೆ. ಜೊತೆಗೆ ಕಲೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಇವುಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಸಾಹೇ ವಿವಿಯ ಕುಲಸಚಿವರಾದ ಡಾ. ಅಶೋಕ್ ಮೆಹ್ತಾ ಮಾತನಾಡಿ, ಅವಕಾಶಗಳಿಗೆ ಕಾಯುತ್ತಿರುವ ಪ್ರತಿಭೆಗಳಿಗೆ ಈ ಕಲೋತ್ಸವ ಒಂದು ಅತ್ಯುತ್ತಮ ವೇದಿಕೆಯಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಳ್ಳಲು ಇರುವಂತಹ ಒಂದೇ ಒಂದು ಅವಕಾಶವೆಂದರೆ ಅದು ಈ ಕಲೋತ್ಸವ. ಈ ವೇದಿಕೆಯಲ್ಲಿ ನಿಮ್ಮಲ್ಲಿರುವ ಪ್ರತಿಭೆಯನ್ನು ಮುಕ್ತವಾಗಿ ಅನಾವರಣಗೊಳಿಸಲು ಅವಕಾಶವಿರುತ್ತದೆ. ಇದರ ಜೊತೆಗೆ ಈ ಕಾರ್ಯಕ್ರಮಗಳಿಂದ ನಾಯಕತ್ವದ ಗುಣ ಹಾಗೂ ವ್ಯಕ್ತಿತ್ವ ವಿಕಸನದಂತಹ ಗುಣಗಳು ಬೆಳೆಯುತ್ತದೆ ಎಂದು ತಿಳಿಸಿದರು.
ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ನಿಯಂತ್ರಕರಾದ ಡಾ. ಜಿ ಗುರುಶಂಕರ್ ಮಾತನಾಡಿ, ಕಲೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನಸ್ಸಿಗೆ ಉತ್ಸಾಹವನ್ನು ನೀಡಿ ಶೈಕ್ಷಣಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಅವಕಾಶ ಮಾಡಿ ಕೊಡುತ್ತದೆ ಎಂದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ. ಎಸ್ ರವಿಪ್ರಕಾಶ ಅವರು ಮಾತನಾಡಿ, ಕಲೋತ್ಸವ ಎಂದು ನಾಮ ಕರಣ ಮಾಡಿ ಇಂದಿಗೆ ೨೫ ವರ್ಷ ಕಳೆದಿದೆ. ೧೦ ದಿನಗಳಿಂದ ನಡೆದ ಫ್ಲಾಶ್ ಮಾಬ್‌ನಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಶೈಕ್ಷಣಿಕ ವರ್ಷ ಮುಗಿಯಿತು ಎಂಬುದು ಗಮನ ದಲ್ಲಿರಲು ಹಾಗೂ ಅವರ ವಿದ್ಯಾಭ್ಯಾಸದ ಮಧ್ಯದಲ್ಲಿ ವಿಶ್ರಾಂತಿಯ ಮನಸ್ಥಿತಿ ಬರಲಿ ಎಂದು ಸಾಂಸ್ಕೃತಿಕ ಉತ್ಸವವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಸಿಇ ವಿಭಾಗದ ಮುಖ್ಯಸ್ಥ ರಾದ ಹಾಗೂ ಕಲೋತ್ಸವದ ಅಧ್ಯಕ್ಷರಾದ ಡಾ. ಎಂ.ಸಿ ಚಂದ್ರಶೇಖರ್, ಡಾ. ಸುನಿಲ್ ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ಎಸ್. ರೇಣುಕಾಲತಾ, ವಿದ್ಯಾರ್ಥಿ ಸಂಯೋಜಕರಾದ ಚಿರಾಗ್ ಗೌಡ ಕೆ.ಎಸ್, ಹರ್ಷ ಎಂ.ಜೆ. ರುದ್ರ ಪ್ರಕಾಶ್ ಪಿ, ಹರ್ಷಿತ ಎಂ.ಪಿ ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.