ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಸ್ವಾಮೀಜಿಗಳು, ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.ಅವೈಜ್ಞಾನಿಕ ಪೈಪ್ಲೈನ್ ಕಾಮಗಾರಿ ನಿಲ್ಲಿಸಬೇಕು ಎಂದು ತುಮಕೂರು ನಗರ ವೀರಶೈವ ಸೇವಾ ಸಮಾಜ ಮತ್ತು ಅಖಿಲ ಭಾರತ ಲಿಂಗಾಯಿತ, ವೀರಶೈವ ಮಹಾಸಭಾ ಒತ್ತಾಯಿಸುತ್ತದೆ ಎಂದು ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಚಂದ್ರಮೌಳಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಹೇಮಾವತಿ ನಾಲೆಗೆ ಲಿಂಕ್ ಕೆನಾಲ್ ನಿರ್ಮಿಸಿ ನಮ್ಮ ಪಾಲಿನ ನೀರನ್ನು ಪಕ್ಕದ ಜಿಲ್ಲೆಗೆ ತೆಗೆದುಕೊಂಡು ಹೋಗುವ ಅಪಾಯಕಾರಿ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕಿರುವುದು ಜಿಲ್ಲೆಯ ರೈತರಿಗೆ ಭಾರೀ ಅನ್ಯಾಯ ಮಾಡಿದಂತೆ ಎಂದರು.
ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ೨೫.೩೧ಟಿಎಂಸಿ ನೀರು ಆದೇಶದಲ್ಲಿ ಅಷ್ಟೇ ಇದ್ದು ಮಳೆಯಾದರೂ ಪೂರ್ಣಪ್ರಮಾಣದಲ್ಲಿ ನಮಗೆ ಗೊರೂರು ಜಲಾಶಯದಿಂದ ದೊರೆ ಯುತ್ತಿಲ್ಲ.ಪರಿಸ್ಥಿತಿ ಹೀಗಿರುವಾಗ ಕುಣಿಗಲ್ ತಾಲೂಕನ್ನು ತೋರಿಸಿ ಮಾಗಡಿ ಹಾಗೂ ರಾಮನಗರ ಭಾಗಕ್ಕೆ ನೀರನ್ನು ತೆಗೆದುಕೊಂಡು ಹೋಗುವ ಕುತಂತ್ರ ನಡೆದಿದ್ದು ತುರುವೇಕೆರೆ, ಗುಬ್ಬಿ, ತುಮಕೂರು ಗ್ರಾಮಾಂತರ ಹಾಗೂ ತುಮಕೂರು ನಗರ ಜನರಿಗೆ ಭಾರೀ ಅನ್ಯಾಯ ಮಾಡಲು ಮುಂದಾಗಿದೆ.ಮಾಗಡಿ, ರಾಮನಗರ ಮತ್ತು ಕನಕಪುರದ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸುವುದಕ್ಕೆ ಅವಕಾಶ ಇದ್ದಾಗ್ಯೂ ಈ ಯೋಜನೆ ಜಾರಿಗೊಳಿಸುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಉದ್ಭವವಾಗಿದೆ ಎಂದು ಎಸ್.ಚಂದ್ರಮೌಳಿ ನುಡಿದರು.
ಅಖಿಲ ಭಾರತ ಲಿಂಗಾಯಿತ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್ ಮಾತನಾಡಿ, ಜಿಲ್ಲೆಯ ನೆಲ-ಜಲದ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡುವ ಮಠಾಧೀಶರ ಮೇಲೂ ಪ್ರಕರಣ ದಾಖಲಿಸುವ ದೂರ್ತತನದ ಕೆಲಸ ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ವೀರಶೈವ ಸಮಾಜದ ಅಧ್ಯಕ್ಷರ ಚಂದ್ರಮೌಳಿ, ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಡಾ.ಎಸ್.ಪರಮೇಶ್, ನಗರ ವೀರ ಶೈವ ಸಮಾಜದ ಕಾರ್ಯದರ್ಶಿ ಹರೀಶ್.ಟಿ.ಬಿ, ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ಕಾರ್ಯಾದರ್ಶಿ ವಿಶ್ವನಾಥ್ ಅಪ್ಪಾಜಪ್ಪ, ಕೋಶಾಧ್ಯಕ್ಷರಾದ ಜಯಣ್ಣ, ಮಹಾಸಭಾ ಕಾರ್ಯದರ್ಶಿ ತಾಳ ವಾರನಹಳ್ಳಿ ವಿಜಯಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ಮಮತ ದಿವಾಕರ್, ಮುಖಂಡರಾದ ತಿಪ್ಪೇಸ್ವಾಮಿ, ಗುಬ್ಬಿ ತಾಲೂಕು ಅಧ್ಯಕ್ಷರಾದ ಮಂಜುನಾಥ್,ಜಿ.ಎಸ್.ಶ್ರೀಧರ್, ಸತ್ಯಮಂಗಲ ಜಗದೀಶ್, ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.