ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗೋಣಿ ತುಮಕೂರು ಮತ್ತು ಅದರ ಆಸುಪಾಸಿನ ಗ್ರಾಮದ ಐದು ಮಂದಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಗಾಯಗೊಂಡವರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಡೆದಿದೆ.
೪ ಗಂಟೆಯ ವೇಳೆ ತಾಲ್ಲೂಕಿನ ನಡುವನಹಳ್ಳಿಯ ವನಜಾಕ್ಷಮ್ಮ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಚಿರತೆ ಏಕಾ ಏಕಿ ದಾಳಿ ನಡೆಸಿದೆ. ಅಕ್ಕಪಕ್ಕ ತೋಟದ ರೈತರು ಗದ್ದಲ ಮಾಡಲಾಗಿ ಅಲ್ಲಿಂದ ಚಿರತೆ ಕಾಲ್ಕಿತ್ತಿದೆ.
ಅದೇ ಚಿರತೆ ಗೋಣಿತುಮಕೂರು ಗ್ರಾಮದ ಹೊರ ವಲಯದ ತೋಟದಲ್ಲಿ ಕೃಷಿಚಟುವಟಿಕೆಯಲ್ಲಿ ತೊಡಗಿದ್ದ ಹುಚ್ಚಮ್ಮನ ಮೇಲೆ ಮೊದಲೇ ಗಾಸಿಗೊಂಡಿದ್ದ ಚಿರತೆ ಎರಗಿ ಮುಖ, ಕುತ್ತಿಗೆ ಪರೆಚಿದೆ. ಮಹಿಳೆ ಚೀರಾಡುತ್ತಿರುವುದನ್ನು ಕಂಡು ಸಹಾಯಕ್ಕೆ ಬಂದ ಬೋರೇಗೌಡ ಮತ್ತು ಸಣ್ಣಲಿಂ ಗಯ್ಯರ ಕೈ, ಕಾಲು ಮತ್ತು ಬೆನ್ನಿನ ಮೇಲೆ ದಾಳಿ ಮಾಡಿದೆ.
ಇದಾದ ಮೇಲೆ ದೇವಿಹಳ್ಳಿ ತೋಟದ ಮನೆಯ ಶೇಖರಯ್ಯನವರ ಶೆಡ್ಡಿನ ಮನೆಗೆ ನುಗ್ಗಿ ಅವರನ್ನೂ ಗಾಯಗೊಳಿಸಿದೆ ತಕ್ಷಣ ಶೆಡ್ಡಿನ ಬಾಗಿಲು ಹಾಕಿಕೊಂಡು ಶೇಖರಯ್ಯ ಹೊರ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು.
‘ಈಗಾಗಲೇ ಐದಾರು ಮೇಕೆ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ್ದು ಮರಿಚಿರತೆ ಸೇರಿದಂತೆ ಮೂರ್ನಾಲ್ಕು ಚಿರತೆಗಳು ಇದ್ದು. ಅರಣ್ಯಾಧಿಕಾರಿ ಎಲ್ಲವನ್ನೂ ಸೆರೆಹಿಡಿಯ ಬೇಕೆಂದು ಗೋಣಿತುಮಕೂರು ಗ್ರಾಮದ ನಂದೀಶ್ ಕುಮಾರ್, ಚಂದನ್ ಮತ್ತು ರಂಗಸ್ವಾಮಿ ಒತ್ತಾಯಿಸಿದರು.’
‘ಮೈಸೂರಿನಿಂದ ಅರವಳಿಕೆ ತಜ್ಞನ ವೈದ್ಯರು ಬರಲಿದ್ದು ತಡರಾತ್ರಿವರೆಗೂ ಚಿರತೆ ಸೆರೆ ಕಾರ್ಯಚರಣೆ ನಡೆಯಲಿದ್ದು, ಈಗಾಗಲೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ವೆಚ್ಚವನ್ನು ಇಲಾಖೆಯೇ ಬರಿಸಲಿದ್ದು ಯಾರಿಗೂ ಪ್ರಾಣಾಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ತಿಳಿಸಿದರು.’
ಈ ಸಂದರ್ಭದಲ್ಲಿ ಜಿಲ್ಲಾಅರಣ್ಯಾಧಿಕಾರಿ ಶಶಿಧರ್ ಮತ್ತು ಭರತ್ ಹಾಗು ಸಿಬ್ಬಂದಿಗಳು ಇದ್ದರು.