ಹುಳಿಯಾರು: ಹುಳಿಯಾರಿನ ಪಶು ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ನಡೆಯುತ್ತಿರುವ ವಾರದ ಸಂತೆ ಸ್ಥಳಾಂತರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಅಧಿಕಾರಿಗಳು ಕೊಟ್ಟ ಮಾತಿನಂತೆ ಬುಧವಾರದೊಳಗೆ ನಡೆದುಕೊಳ್ಳದಿದ್ದರೆ ಗುರುವಾರ ಮತ್ತೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಎಚ್ಚರಿಕೆ ನೀಡಿದ್ದಾರೆ.
ಹುಳಿಯಾರಿನ ಪಟ್ಟಣ ಪಂಚಾಯ್ತಿ ಬಳಿ ಸೋಮವಾರ ಸಭೆ ನಡೆಸಿದ ಹೊಸಹಳ್ಳಿ ಚಂದ್ರಣ್ಣ ಬಣದ ರೈತರು ಅಧಿಕಾರಿಗಳು ಪದೇಪದೇ ರೈತರ ವಿಚಾರವಾಗಿ ಮಾತು ತಪ್ಪುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯ್ತಿಯವರು ರಸ್ತೆ ಬದಿಯಲ್ಲಿ ವಾರದ ಸಂತೆ ಮಾಡುತ್ತಿರುವ ರೈತರು ಮತ್ತು ವರ್ತಕರಿಂದ ಎರಡ್ಮೂರು ದಶಕಗಳಿಂದಲೂ ಸುಂಕ ವಸೂಲಿ ಮಾಡುತ್ತಿದ್ದಾರೆ. ವಾರ್ಷಿಕ ಕನಿಷ್ಟ ೨ ಲಕ್ಷ ರೂ. ಎಂದರೂ ಇಲ್ಲಿಯವರೆವಿಗೆ ಅರ್ಧ ಕೋಟಿ ಗೂ ಹೆಚ್ಚು ಹಣ ಸಂಗ್ರಹ ಮಾಡಿದ್ದಾರೆ. ಆದರೆ ಸುಂಕ ವಸೂಲಿಗೆ ಪ್ರತಿಯಾಗಿ ಒಂದೇ ಒಂದು ಲೋಟ ನೀರು ಕೊಟ್ಟಿಲ್ಲ ಎಂದರು ಆರೋಪಿಸಿದರು.
ಸುಂಕ ಸಂಗ್ರಹದ ಗುತ್ತಿಗೆ ನೀಡುವ ಹರಾಜು ಸಂದರ್ಭದಲ್ಲಿ ನೀರು, ನೆರಳು, ಶೌಚಾಲಯ ಕೊಡುವಂತೆ ಒತ್ತಾಯಿಸುತ್ತ ಬಂದಿದ್ದರೂ ಸಹ ನಿರ್ಲಕ್ಷö್ಯ ಧೋರಣೆ ಅನುಸರಿಸುತ್ತಿದ್ದಾರೆ. ಹಾಗಾಗಿ ಮೊದಲ ಬಾರಿ ಧರಣಿ ಕುಳಿತಾಗ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ೧೫ ದಿನ ಕಾಲವಕಾಶ ಪಡೆದು ಮಾತು ತಪ್ಪಿದ್ದರು. ೧೫ ದಿನಗಳ ನಂತರ ಮತ್ತೆ ಧರಣಿ ಆರಂಭಿ ೩ ದಿನ ಕಳೆದಾಗ ತಹಸೀಲ್ದಾರ್ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಬಂದು ಮುಂದಿನ ವಾರದಿಂದಲೇ ನೀರು, ಶೌಚಾಲಯ ವ್ಯವಸ್ಥೆ ಮಾಡುವ ಹಾಗೂ ಸ್ಥಳಾಂತರದ ಸಭೆ ನಡೆಸುವ ಭರವಸೆ ನೀಡಿದ್ದರು.
ಆದರೆ ಕಳೆದ ವಾರವೂ ಸಹ ಸಂತೆಯಲ್ಲಿ ನೀರಿನ ವ್ಯವಸ್ಥೆ ಮಾಡಿಲ್ಲ. ಎಪಿಎಂಸಿ ಅಧಿಕಾರಿಗಳೊಂದಿಗೆ ಸಂತೆ ಸ್ಥಳಾಂತರಿಸುವ ಬಗ್ಗೆ ಸಭೆ ನಡೆಸಲಿಲ್ಲ. ಕಳೆದ ಶನಿವಾರ ಬೆಳಗ್ಗೆ ಸಭೆ ಅಂದರು, ಬೆಳಗ್ಗೆ ಬಂದಾಗ ಸಂಜೆ ಅಂದರು, ಸಂಜೆ ಬಂದಾಗ ಸೋಮವಾರ ಅಂದರು. ಈಗ ಸೋಮವಾರ ಬಂದರೆ ಮತ್ತೆ ಗುರುವಾರ ಅನ್ನುತ್ತಿದ್ದಾರೆ. ರೈತರನ್ನು ಹೀಗೆ ಅಲೆಸುವುದು ಅಧಿಕಾರಿಗಳಿಗೆ ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಗುರುವಾರ ಮತ್ತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಿದ್ದು ಈ ಬಾರಿ ಬೇಡಿಕೆ ಈಡೇರದ ವಿನಃ ಧರಣಿ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು, ಟಿ.ಎಸ್.ಪ್ರಶಾಂತ್, ನೀರಾ ಈರಣ್ಣ, ಮೆಕಾನಿಕ್ ಜಗದೀಶ್, ರಮೇಶ್, ಮಂಜುನಾಥ್, ರೇವಣ್ಣ, ನಿಂಗಪ್ಪ, ಹನುಮಂತರಾಜ್ ಅರಸ್, ಪೆದ್ದಾಬೋವಿ, ಬಸವರಾಜು, ಮಂಜನಾಯ್ಕ,  ಯಶೋದಮ್ಮ, ಆಶಾ ಮತ್ತಿತರರು ಇದ್ದರು.

(Visited 1 times, 1 visits today)