ಚಿಕ್ಕನಾಯಕನಹಳ್ಳಿ: ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡವನ್ನು ಕೆಆರ್‌ಎಸ್‌ಪಕ್ಷದ ಹೋರಾಟದ ಫಲವೆಂಬ0ತೆ ಜೆಸಿಬಿ ಮೂಲಕ ಕಟ್ಟಡವನ್ನು ಕೆಡವಿ ಹಾಕಿದ ವಿನೂತನ ಘಟನೆ ತಾಲ್ಲೂಕಿನ ಲಕ್ಕಸಂದ್ರದಲ್ಲಿ ನಡೆದಿದೆ.
ತಾಲ್ಲೂಕಿನ ಹೊಯ್ಸಳಕಟ್ಟೆ ಪಂಚಾಯಿತಿ ಲಕ್ಕೇನಹಳ್ಳಿ ಗ್ರಾಮ ಅತ್ಯಂತ ಹಿಂದುಳಿದ ಪ್ರದೇಶವೆನಿಸಿದ್ದು, ಈ ಗ್ರಾಮದಲ್ಲಿ ವಿವೇಕ ಯೋಜನೆಯಡಿ ಹೊಸದಾಗಿ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ತಳಪಾಯವಿಲ್ಲದೆ ಕಟ್ಟಡ ಕಟ್ಟಲಾಗುತ್ತಿದೆ ಎಂಬ ದೂರಿನ ಮೇಲೆ ಕೆಆರ್ ಎಸ್ ಪಕ್ಷದ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ ತಮ್ಮ ತಂಡದೊ0ದಿಗೆ ಸ್ಥಳಕ್ಕೆ ತೆರಳಿ ತಳಪಾಯವಿಲ್ಲದೆ, ಕಬ್ಬಿಣ ಹಾಗೂ ಸಿಮೆಂಟ್ ಗಳನ್ನು ನಿಯಮದಂತೆ ಬಳಸದೆ, ಕಳಪೆ ಮಟ್ಟದ ಇಟ್ಟಿಗೆ ಬಳಸಿ ಕಟ್ಟಡ ನಿರ್ಮಿಸುತ್ತಿರುವುದನ್ನು ಬೆಳಕಿಗೆ ತಂದರು.
ಜಿಲ್ಲಾ ಪಂಚಾಯಿತ್ ಇಂಜಿನಿಯರ್ ಇಲಾಖೆಯಡಿ ಗುತ್ತಿಗೆದಾರ ಕಟ್ಟಡವನ್ನು ನಿರ್ಮಿಸುತ್ತಿದ್ದು, ಸದರಿ ಕಟ್ಟಡ ನಿರ್ಮಾಣದ ಹಂತದಲ್ಲಿ ಸಂಬ0ಧಿಸಿದ ಇಂಜಿನಿಯರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಸ್ಥಳ ಪರಿಶೀಲನೆ ಮಾಡದ ಬಗ್ಗೆ ಆಕ್ಷೇಪಿಸಿ, ಮಕ್ಕಳ ಆಯೋಗಕ್ಕೂ ದೂರು ನೀಡಿದ್ದರು.
ಈ ಸಂಬ0ಧ ಮಕ್ಕಳ ಆಯೋಗ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಅತ್ಯಂತ ಕಳಪೆಯಾಗಿರುವುದನ್ನು ಮನಗಂಡು ಗುಣಮಟ್ಟದ ಕಟ್ಟಡ ಕಟ್ಟಿಕೊಡಲು ಆದೇಶಿಸಿದ್ದರು. ಆದರೆ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಗುತ್ತಿಗೆದಾರ ಹಾಗೂ ಸರಕಾರಿ ವ್ಯವಸ್ಥೆ ಮತ್ತೆ ಅದೆ ಕಳಪೆ ಮಟ್ಟದಲ್ಲಿ ಕಾಮಗಾರಿ ಮುಂದುವರೆಸಿದ ಕಾರಣ ಮತ್ತೆ ದೂರು ಸಲ್ಲಿಸಿ, ಅಡಿಪಾಯವಿಲ್ಲದ ಹಾಗೂ ಅಭದ್ರ ಪಿಲ್ಲರ್ ಗಳಿಂದ ನಿರ್ಮಾಣವಾದ ಕಟ್ಟಡ ಕುಸಿದು ಬಿದ್ದು ಜೀವಹಾನಿಯಾಗಿ ಅನಾಹುತವಾದರೆ ಇದಕ್ಕೆ ಸದರಿ ವ್ಯವಸ್ಥೆಯೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಪರಿಣಾಮ ಸಂಬ0ಧಿಸಿದ ಇಲಾಖೆ ಅರೆಬರೆ ಕಾಮಗಾರಿಯಾಗಿದ್ದ ಶಾಲಾ ಕಟ್ಟಡವನ್ನು ಜೆಸಿಬಿ ಮೂಲಕ ನಾಶಪಡಿಸಲಾಯಿತು.
ಕಟ್ಟಡ ಕೆಡವಿದ ವೆಚ್ಚವನ್ನೂ ಗುತ್ತಿಗೆದಾರರಿಂದಲೆ ವಸೂಲಿ ಮಾಡಲಾಗುವುದು ಹಾಗೂ ಗುತ್ತಿಗೆದಾರನ ಎಫ್ಎಸ್ ಡಿ ನಿಧಿಯಲ್ಲಿ ಹಣವನ್ನು ಕಠಾವ್ ಮಾಡಲಾಗುವುದು ಎಂದು ಸಂಬ0ಧಿಸಿ ಇಂಜಿನಿಯರ್ ಇಲಾಖೆ ಅಧಿಕಾರಿ ತಿಳಿಸಿ, ಗುತ್ತಿಗೆದಾರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸುವ ಹಾಗೂ ಸಂಬ0ಧಿಸಿದ ಇಂಜಿನಿಯರ್ ಮೇಲೆ ಕ್ರಮಕ್ಕಾಗಿ ಮೇಲಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಳಪೆ ಕಾಮಗಾರಿಯ ವಿರುದ್ದದ ಕೆಆರ್ ಎಸ್ ಹಾಗೂ ಲಂಚಮುಕ್ತ ವೇದಿಕೆಯ ಹೋರಾಟಕ್ಕೆ ನ್ಯಾಯ ಸಂದಿದೆ, ಕಳಪೆ ಕಾಮಗಾರಿಯಡಿ ಸರ್ಕಾರಿ ಕಟ್ಟಡವನ್ನು ನಾಶಪಡಿಸಿದ ಘಟನೆ ರಾಜ್ಯದಲ್ಲಿಯೇ ಅಪರೂಪವೆನಿಸಿದೆ. ಭ್ರಷ್ಠ ವ್ಯವಸ್ಥೆಯೇ ಸಕ್ರಮವಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ನೈಜ ಹೋರಾಟಕ್ಕೆ ಸ್ವಲ್ಪ ಮಟ್ಟದ ನ್ಯಾಯ ದೊರಕಿರುವುದು ಭ್ರಷ್ಟರ ವಿರುದ್ದದ ನಮ್ಮ ಆಂದೋಲನಕ್ಕೆ ಶಕ್ತಿ ಹಾಗೂ ಹುಮ್ಮಸ್ಸು ಬಂದಿದೆ, ಆದರೆ ಈ ಕಾಮಗಾರಿಯಲ್ಲಾಗಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರಕ್ಕೆ ಕಾರಣರಾದ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಶಿಕ್ಷೆಯಾಗುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಕೆಆರ್ ಎಸ್ ಪಕ್ಷದ ರಾಜ್ಯ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದರು.

(Visited 1 times, 1 visits today)