
ತುರುವೇಕೆರೆ: ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಇದು ಆಧ್ಯಾತ್ಮ ಮತ್ತು ಮನೋದೈಹಿ ಆರೋಗ್ಯ ವಿಜ್ಞಾನವಾಗಿದೆ ಮನೋ ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಸಹಕಾರಿ ಎಂದು ಯೋಗ ಗುರು ಲಕ್ಷ್ಮಣ್ ಜೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದಂಡಿನಶಿವರ ಹೋಬಳಿ ಸಾರಿಗೇಹಳ್ಳಿ ಗ್ರಾಮದಲ್ಲಿ ನಡೆದ ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ನಾಡಿನ ಖ್ಯಾತ ಯೋಗ ಗುರು ಲಕ್ಷ್ಮಣ್ ಜೀ ಯವರು ಇಂದಿನ ನಮ್ಮ ಬಹುತೇಕ ಸಮಸ್ಯೆಗಳಿಗೆ ಪ್ರಜ್ಞಾ ಅಪರಾಧಗಳೇ ಕಾರಣವಾಗಿವೆ. ತಿಳಿದು ತಿಳಿದು ನಾವು ಪದೇ ಪದೇ ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ ಆ ಧುನಿಕ ಯುಗದಲ್ಲಿ ಜನರು ಅತಿಯಾಗಿ ಯಂತ್ರ ಮತ್ತು ತಂತ್ರಜ್ಞಾನದ ಮೇಲೆ ಅವಲಂಭಿತರಾಗಿದ್ದು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಹೆಚ್ಚು ಹೆಚ್ಚು ಜನರು ಮನೋದೈಹಿಕ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ವಿಪರ್ಯಾಸ. ನಮ್ಮ ಆಹಾರ ಪದ್ದತಿ, ಜೀವನ ಶೈಲಿ ಹಾಗೂ ಆಲೋಚನಾ ರೀತಿ ನೀತಿಗಳಲ್ಲಾಗಿರುವ ಅಮೂಲಾಗ್ರ ಬದಲಾವಣೆಗಳನ್ನು ಗಮನಿಸಿದರೆ ನಿತ್ಯದಲ್ಲಿ ನೂರಾರು ತಪ್ಪುಗಳಾಗುತ್ತಿವೆ. ನಮ್ಮ ಪೂರ್ವಜರು ಮಿತವಾದ ಸೌಲಭ್ಯ ಸೌಕರ್ಯಗಳನ್ನು ಹೊಂದಿದ್ದರೂ ಆರೋಗ್ಯಕರವಾಗಿ ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಇಂದು ನಾವು ಸಾಕಷ್ಟು ಸೌಕರ್ಯ ಮತ್ತು ಸೌಲಭ್ಯಗಳನ್ನು ಹೊಂದಿ ದ್ದರೂ ಸಹ ಹೆಚ್ಚಿನ ಜನರು ಅನಾರೋಗ್ಯ ಪೀಡಿತರಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಮನೋದೈಹಿಕ ಆರೋಗ್ಯ ಸುಧಾರಣೆಗೆ ಯೋಗ ಮಾರ್ಗವನ್ನು ಅನುಸರಿಸುವುದು ಸರ್ವ ವಿಧದಲ್ಲೂ ಸೂಕ್ತವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗ ಸೂತ್ರದಲ್ಲಿ ತಿಳಿಸಿರುವ ಸಾಮಾಜಿಕ ಮತ್ತು ವೈಯಕ್ತಿಕ ನಿಯಮಗಳನ್ನು ಅಳವಡಿಸಿಕೊಂಡು ಯೋಗ ಜೀವನಕ್ಕೆ ತೆರೆದುಕೊಂಡರೆ ಆರೋಗ್ಯ ವೃದ್ಧಿ, ಮಾನಸಿಕ ನೆಮ್ಮದಿ ಜೊತೆಗೆ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯವನ್ನು ಕಾಣಬಹುದು. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ನಿತ್ಯ ಜೀವನದಲ್ಲಿ ಅಳಡಿಸಿಕೊಳ್ಳಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ನಿವೃತ್ತ ಪ್ರಾಂಶುಪಾಲರಾದ ಶ್ರೀ ಮಹದೇವಯ್ಯನವರು ಮಾತನಾಡಿ ನನಗೀಗ ೯೪ ವರ್ಷಗಳಾದರೂ ಸ್ವಾವ ಲಂಬಿಯಾಗಿದ್ದೇನೆ. ಇದಕ್ಕೆ ಕಾರಣ ಯೋಗಾಭ್ಯಾಸ. ನನ್ನ ೩೦ ನೇ ವಯಸ್ಸಿನಲ್ಲಿ ನಾನು ಯೋಗಾಭ್ಯಾಸ ಪ್ರಾರಂಭಿಸಿ ಇಂದಿಗೂ ನಿತ್ಯ ಮುಂದುವರಿಸಿಕೊAಡು ಬರುತ್ತಿದ್ದೇನೆ. ಶಿಸ್ತು ಬದ್ಧ ಜೀವನ ಮತ್ತು ಸಕಾರಾತ್ಮಕ ಚಿಂತನೆಯೇ ನನ್ನ ಆರೋಗ್ಯದ ಗುಟ್ಟಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಫಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಶಿಬಿರಾರ್ಥಿಗಳೆಲ್ಲರಿಗೂ ಹಣ್ಣಿನ ಗಿಡಗಳನ್ನು ವಿತರಿಸಿ ಪರಿಸರ ಕಾಳಜಿಯನ್ನು ಮೂಡಿಸಲಾಯಿತು. ಸ್ವಾಸ್ಥ್ಯ ಮಾರ್ಗ ಯೋಗ ಪ್ರತಿಷ್ಠಾನ ನಾಗಮಂಗಲದ ಯೋಗ ಗುರು ಲಕ್ಷ್ಮಣ್ ಜೀ ಅವರಿಗೆ ಶಿಬಿರಾರ್ಥಿಗಳಿಂದ ಗೌರವ ಸಮರ್ಪಣೆ ಮಾಡಲಾಯಿತು. ಮತ್ತು ಶ್ರೀ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಪ್ರಾಂಶು ಪಾಲರಾದ ಮಹಾದೇವಯ್ಯ, ಇದೇ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಮ್ಮ ಹಾಗೂ ಭಜನಾ ಕಲಾವಿದರಾದ ನಿಜಗುಣಯ್ಯ ಅವರನ್ನು ಅಭಿನಂದಿಸಲಾಯಿತು ಶಿಬಿರದಲ್ಲಿ ಸಾರಿಗೆಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮದ ೧೦೦ ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.



