ತುಮಕೂರು: ಕಬ್ಬಿಗೆ ಹೆಚ್ಚಿನ ದರ ನಿಗದಿಗೆ ಆಗ್ರಹಿಸಿ ಬೆಳಗಾಂನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಬೆಂಬಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಹಾಗೂ ಹುಳಿಯಾರಿನಲ್ಲಿ ಕಳೆದ ೩೦ ದಿನಗಳಿಂದ ನಡೆಯುತ್ತಿರುವ ಕಸ ವಿಲೇವಾರಿ ಘಟಕದ ರೈತರ ಹೋರಾಟ ಬೆಂಬಲಿಸಿ, ಕೂಡಲೇ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಈ ಸಂಬAಧ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಕಳೆದ ೮ ದಿನಗಳಿಂದ ಬೆಳಗಾಂನಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ ೩೫೦೦ ರೂ. ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆಯನ್ನು ನಿರ್ಲಕ್ಷ÷್ಯ ಮಾಡಿದೆ ಎಂದು ಆರೋಪಿಸಿದರು.
ಸಾವಿರಾರು ರೈತರು ರಸ್ತೆಯಲ್ಲಿ ಕುಳಿತು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಿ ಕಬ್ಬಿಗೆ ಬೆಲೆ ನಿಗದಿ ಮಾಡದೆ ಇರುವ ರೈತ ವಿರೋಧಿ ನೀತಿ ಖಂಡನೀಯ ಎಂದರು.
ಕಳೆದ ಹತ್ತಾರು ವರ್ಷಗಳಿಂದ ನೆರೆ ರಾಜ್ಯಗಳ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ೩೪೦೦-೩೫೦೦ ರೂ. ನೀಡುತ್ತಿವೆ. ಆದರೆ ನಮ್ಮ ರಾಜ್ಯದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ೩೧೦೦ ರೂ. ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯದ ೮೧ ಕಾರ್ಖಾನೆಗಳಲ್ಲಿ ಸುಮಾರು ೫೦ ಸಕ್ಕರೆ ಕಾರ್ಖಾನೆಗಳು ವಿವಿಧ ಪಕ್ಷಗಳ ಮುಖಂಡರ ಮಾಲೀಕತ್ವದ ಕಾರ್ಖಾನೆಗಳು. ಇವುಗಳು ರೈತರನ್ನು ವಂಚಿಸುತ್ತಲೇ ಬಂದಿವೆ. ಈ ಹಿಂದೆ ೧೧೦ ದಿನಗಳ ಕಾಲ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಹೋರಾಟ ಮಾಡಿದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರೈತರಿಗೆ ಏನು ಮಾಡದಿದ್ದರೂ ಈಗ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅದರ ಬದಲು ಕೇಂದ್ರ ಸರ್ಕಾರಕ್ಕೆ ಹೇಳಿ ಹೆಚ್ಚಿನ ಬೆಲೆ ನಿಗದಿಪಡಿಸಲಿ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೂಡಲೇ ಹೋರಾಟ ನಡೆಸುತ್ತಿರುವ ಕಬ್ಬು ಬೆಳೆಗಾರರೊಂದಿಗೆ ಮಾತುಕತೆ ನಡೆಸಿ ಪ್ರತಿ ಟನ್ ಕಬ್ಬಿಗೆ ೩೫೦೦ ರೂ. ಏಕ ರೀತಿ ಬೆಲೆ ನಿಗದಿಪಡಿಸಬೇಕು. ಕೂಡಲೇ ಕಬ್ಬಿನ ಬಾಕಿ ಹಣ ಪಾವತಿಸಬೇಕು ಮತ್ತು ಕಬ್ಬು ಬೆಳೆಗಾರರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ಹಾಗೆಯೇ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದ ಸ್ವಚ್ಛತೆಗೆ ಅನುಕೂಲವಾಗುವಂತೆ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕು. ಸಂತೆ ಮೈದಾನದಲ್ಲಿ ನಡೆಯುತ್ತಿರುವ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿ ಅಲ್ಲಿಗೆ ಬರುವ ಸಾರ್ವಜನಿಕರು, ರೈತರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸ್ವಚ್ಛತೆ ಕಾಪಾಡಿ ನೆರಳು, ದೀಪ, ಕುಡಿಯುವ ನೀರು, ಶೌಚಾಲಯ, ತಂಗುದಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಇತರೆ ಜನಪರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಂದ್ರಪ್ಪನವರ ನೇತೃತ್ವಜಲ್ಲಿ ಕಳೆದ ೩೦ ದಿನಗಳಿಂದ ಅಹೋರಾತ್ರಿ ಧರಣಿ, ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
ಕಸ ವಿಲೇವಾರಿ ಘಟಕ ಸ್ಥಾಪಿಸುವುದು, ಮೂಲ ಸೌಕರ್ಯ ಕಲ್ಪಿಸಬೇಕಾದ್ದು ಸ್ಥಳೀಯ ಪಟ್ಟಣ ಪಂಚಾಯ್ತಿ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಆದ್ಯ ಕರ್ತವ್ಯ. ಆದರೂ ೩೦ ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದರೂ ಈವರೆವಿಗೂ ಈ ಸಮಸ್ಯೆಗಳನ್ನು ಬಗೆಹರಿಸದೆ ಇರುವುದನ್ನು ಖಂಡಿಸುವುದಾಗಿ ಹೇಳಿದರು.
ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಯೋಗ್ಯತೆ ಇಲ್ಲದ ಸರ್ಕಾರ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತಗಳು ಜನರ ಮೇಲೆ ತೆರಿಗೆ ಹೇರುತ್ತಾ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಕನಿಷ್ಠ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಬಂದೊದಗಿರುವುದು ಶೋಚನೀಯ ಸಂಗತಿ. ಈ ಕೂಡಲೇ ಸಂಬAಧಪಟ್ಟವರು ಈ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ನಾವೆಲ್ಲರೂ ಸೇರಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ತಕ್ಷಣ ಜಿಲ್ಲಾಧಿಕಾರಿಗಳು ತುರ್ತು ಪರಿಹಾರ ಸೂಚಿಸಿ ಕಳೆದ ೩೦ ದಿನಗಳಿಂದ ನಡೆಯುತ್ತಿರುವ ದೀರ್ಘ ಹೋರಾಟವನ್ನು ಅಂತ್ಯಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ರಾಜ್ಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ, ಗುಬ್ಬಿ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ, ತುಮಕೂರು ತಾಲ್ಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ರಂಗಹನುಮಯ್ಯ ಸೇರಿದಂತೆ ನೂರಾರು ಮಂದಿ ರೈತರು ಪಾಲ್ಗೊಂಡಿದ್ದರು.

(Visited 1 times, 1 visits today)