ತುಮಕೂರು: ವಿವಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ವಿವಿ ಉಳಿಸಿ ಹೋರಾಟ ಸಮಿತಿಯ ಸಾಹಿತಿಗಳು, ಯುವಜನರು, ವಿದ್ಯಾರ್ಥಿ ಹಾಗೂ ದಲಿತ ನಾಯಕರುಗಳನ್ನು ಪರಿಗಣಿಸದೆ ಕಡೆಗಣಿಸಿ ರುವುದನ್ನು ಖಂಡಿಸಿ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ವತಿಯಿಂದ ನಗರದ ವಿವಿ ಕುಲಪತಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ತುಮಕೂರು ವಿವಿ ಆರಂಭವಾದ ದಿನಗಳಿಂದಲೂ ವಿವಿ ಉಳಿಸಿ ಹೋರಾಟ, ಹಳೆಯ ಲಾಂಛನವನ್ನೇ ಮರುಸ್ಥಾಪಿಸಬೇಕು ಮತ್ತು ಶುಲ್ಕ ಹೆಚ್ಚಳ ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಾ ಬಂದ ಸಾಹಿತಿ ಬರಗೂರು ರಾಮಚಂದ್ರಪ್ಪ, ಜಿಲ್ಲೆಯ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್, ನಿವೃತ್ತ ಪ್ರಾಂಶುಪಾಲ ಪ್ರೊ.ಶ್ರೀನಿವಾಸಯ್ಯ, ಸಾಹಿತಿಗಳಾದ ಕೆ.ಬಿ.ಸಿದ್ದಯ್ಯ, ಜಿ.ವಿ.ಆನಂದಮೂರ್ತಿ, ಚಿದಂಬರಯ್ಯ, ದಲಿತ ಸಂಘಟನೆ ನಾಯಕ ಕೊಟ್ಟ ಶಂಕರ್, ಡಿವೈಎಫ್‌ಐ ಮುಖಂಡ ಎಸ್.ರಾಘವೇಂದ್ರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷರಾಗಿದ್ದ ಈ.ಶಿವಣ್ಣ, ದಲಿತ ಮುಖಂಡ ಎ.ನರಸಿಂಹಮೂರ್ತಿ ಮೊದಲಾದವರು ವಿವಿ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದ್ದರು.
ಆದರೆ ವಿವಿಯ ಜ್ಞಾನಸಿರಿ ಕ್ಯಾಂಪಸ್ ಉದ್ಘಾಟನೆಗೆ ಹೋರಾಟ ಸಮಿತಿಯ ಎಲ್ಲಾ ನಾಯಕರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ತಮಗೆ ಬೇಕಾಗಿರುವಂತಹ ಹೆಸರುಗಳನ್ನು ಮಾತ್ರ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ ಎಂದು ಖಂಡಿಸಿ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಯ ನಾಯಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯು ಸಂಜೆಯವರೆಗೂ ಮುಂದುವರೆದು ಕೊನೆಗೆ ಕುಲಪತಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ಪ್ರೋಟೋಕಾಲ್ ಇದ್ದುದ್ದರಿಂದ ಆಹ್ವಾನಿಸಲಾಗಿಲ್ಲ ಎಂದು ಸಮಜಾಯಿಸಿ ನೀಡಿದರು. ಇದನ್ನು ಪ್ರತಿಭಟನಾಕಾರರು ಒಪ್ಪದೆ ವಿವಿಗಾಗಿ ಹೋರಾಟ ಮಾಡಿದ ಎಲ್ಲ ನಾಯಕರುಗಳಿಗೂ ಸಹ ಆಹ್ವಾನ ನೀಡಬೇಕಾಗಿತ್ತು ಎಂದು ತಿಳಿಸಿದರು. ಕುಲಪತಿಗಳೊಂದಿಗೆ ಮಾತನಾಡಿದ ಪ್ರತಿಭಟನಾಕಾರರು ಹಿಂದೆ ಇದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಮತ್ತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರುಗಳನ್ನು ಭೇಟಿ ಮಾಡಿ ವಿವಿಯ ಸ್ಥಿತಿಗತಿ ಬಗ್ಗೆ ಮನವಿಪತ್ರ ಸಲ್ಲಿಸಲಾಗಿತ್ತು. ಇದರ ಭಾಗವಾಗಿ ನೂತನ ಕ್ಯಾಂಪಸ್‌ಗೆ ಜಾಗ ಮಂಜೂರಾಗಿತ್ತು ಮತ್ತು ಅಗತ್ಯವಿರುವ ಅನುದಾನ ಬಿಡುಗಡೆಗೆ ಮುಂದಾಗಿತ್ತು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಎಸ್.ರಾಘವೇಂದ್ರ, ಎಸ್‌ಎಫ್‌ಐ ಈ.ಶಿವಣ್ಣ, ದಲಿತ ಮುಖಂಡ ಎ.ನರಸಿಂಹಮೂರ್ತಿ, ಸಮುದಾಯದ ಅಶ್ವತ್ಥಯ್ಯ, ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಕುಮಾರ್, ರಾಮಚಂದ್ರಪ್ಪ, ಅಶ್ವತ್ಥನಾರಾಯಣ್, ಪ್ರವೀಣ್‌ಕುಮಾರ್, ಶ್ರೀನಿವಾಸ, ಎನ್.ಕೆ.ಸುಬ್ರಮಣ್ಯ, ಲೋಕೇಶ್, ಸಾಹಿಲ್, ಸಲೀಂ, ವೆಂಕಟೇಶ್, ಅಪ್ತಾಬ್ ಹಾಜರಿದ್ದರು.

(Visited 1 times, 1 visits today)