ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯ ಹಿಂದಿನ ಮುಖ್ಯಾಧಿಕಾರಿ ನಾಗಭೂಷಣ್ ಅವರು ವರ್ಗಾವಣೆಗೊಂಡು ಅಧಿಕಾರದಿಂದ ಬಿಡುಗಡೆಗೊಂಡ ನಂತರವೂ ಪಟ್ಟಣ ಪಂಚಾಯಿತಿಯ ಚೆಕ್‌ಗಳನ್ನು ಆನ್‌ಲೈನ್ ಮೂಲಕ ಡ್ರಾ ಮಾಡಿಸುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹಾಲಿ ಪ.ಪಂ. ಕೌನ್ಸಿಲರ್ ಅಬೂಬಕರ್ ಸಿದ್ದೀಕ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಈ ಸಂಬ0ಧ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರೋಪ: ಮಾಧ್ಯಮದ ಮುಂದೆ ದಾಖಲೆಗಳನ್ನು ಪ್ರದರ್ಶಿಸಿದ ಅಬೂಬಕರ್ ಸಿದ್ದೀಕ್ ಅವರು, ನಾಗಭೂಷಣ್ ಅವರು ಆಗಸ್ಟ್ ತಿಂಗಳಲ್ಲಿ ಹುಳಿಯಾರಿನಿಂದ ವರ್ಗಾವಣೆಗೊಂಡ ಬಳಿಕದ ಚಟುವಟಿಕೆಗಳನ್ನು ವಿವರಿಸಿದರು.
ರಿಲೀವ್ ಮತ್ತು ಜಾಯಿನ್: ಮುಖ್ಯಾಧಿಕಾರಿಯಾಗಿದ್ದ ನಾಗಭೂಷಣ್ ಅವರು ಆಗಸ್ಟ್ ೧೨ ರಂದು ತುಮ ಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರದಿಂದ ಬಿಡುಗ ಡೆಗೊಂಡಿದ್ದರು. ಅದಾದ ಬಳಿಕ ಆಗಸ್ಟ್ ೧೪ ರಂದು ಗಂಗಾವ ತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಚೆಕ್ ಡ್ರಾ ೧ (ವರ್ಗಾವಣೆ ಬಳಿಕ): ಗಂಗಾವತಿಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನವೇ, ಅಂದರೆ ಆಗಸ್ಟ್ ೧೪ ರಂದು ಸಂಜೆ ೫ ಗಂಟೆ ೩೫ ನಿಮಿಷಕ್ಕೆ ಹುಳಿಯಾರು ಪ.ಪಂ.ನ ಚೆಕ್ ಅನ್ನು ಡ್ರಾ ಮಾಡಲಾಗಿದೆ. ಈ ಚೆಕ್ ಖಾತೆಯಿಂದ ಪಾಸ್ ಆಗಿದೆ.
ಚೆಕ್ ಡ್ರಾ ೨: ಇದಾದ ಕೆಲ ದಿನಗಳ ಬಳಿಕ, ಆಗಸ್ಟ್ ತಿಂಗಳ ೩೦ ರಂದು ಮಧ್ಯಾಹ್ನ ೧೨ ಗಂಟೆ ೩೫ ನಿಮಿಷಕ್ಕೆ ಮತ್ತೊಂದು ಚೆಕ್ ಸಹ ಡ್ರಾ ಮಾಡಲಾಗಿದೆ. ಈ ಚೆಕ್ ಕೂಡ ಪಾಸ್ ಆಗಿದೆ.
ಅಧಿಕಾರದ ದುರುಪಯೋಗ: ವರ್ಗಾವಣೆಗೊಂಡ ಅಧಿಕಾರಿಗಳಿಗೆ ಚೆಕ್ ಡ್ರಾ ಮಾಡಿಕೊಡಲು ಯಾವುದೇ ಅಧಿಕಾರ ವಿರುವುದಿಲ್ಲ. ಆದರೂ ಆನ್‌ಲೈನ್ ಮೂಲಕ ಈ ಚೆಕ್‌ಗಳನ್ನು ಡ್ರಾ ಮಾಡಲಾಗಿದೆ. ಅವರ ಸಹಿಯನ್ನು ದುರುಪಯೋಗಪಡಿಸಿ ಕೊಳ್ಳಲಾಗಿದೆಯೇ ಅಥವಾ ಅವರೇ ಡ್ರಾ ಮಾಡಿಸಿಕೊಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಕೌನ್ಸಿಲರ್ ಸಿದ್ದೀಕ್ ಒತ್ತಾಯಿಸಿದರು.
ಅಲ್ಲದೆ, ಪಟ್ಟಣ ಪಂಚಾಯಿತಿ ಕಾಮಗಾರಿಗಳ ಬಿಲ್‌ಗಳ ವಿಚಾರದಲ್ಲಿಯೂ ಅವ್ಯವಹಾರ ನಡೆದಿದ್ದು, ಕಾಮಗಾರಿಯ ಜಿಪಿಎಸ್ ಫೋಟೋ ಮತ್ತು ಇತರೆ ಅಗತ್ಯ ದಾಖಲೆಗಳಿಲ್ಲದೆ ಬೇಕಾಬಿಟ್ಟಿಯಾಗಿ ಬಿಲ್‌ಗಳನ್ನು ಮಾಡಿದ್ದಾರೆ. ಹುಳಿಯಾರು ಪಟ್ಟಣದ ಜನರ ಹಣವನ್ನು ಲೂಟಿ ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಗೆ ಆಗ್ರಹ: ಈ ಎಲ್ಲಾ ಅಕ್ರಮಗಳಿಗೆ ಸಂಬ0ಧಿಸಿದ0ತೆ ತಕ್ಷಣವೇ ಲೋಕಾಯುಕ್ತ ಅಥವಾ ಸಂಬ0ಧಿಸಿದ ಉನ್ನತ ಅಧಿಕಾರಿಗಳು ತನಿಖೆ ನಡೆಸಿ, ಅಧಿಕಾರ ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಬೂಬಕರ್ ಸಿದ್ದೀಕ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಮಾಜಿ ಅಧ್ಯಕ್ಷ ಕೆಎಂಎಲ್ ಕಿರಣ್, ಕೌನ್ಸಿಲರ್‌ಗಳಾದ ಮಹಮ್ಮದ್ ಜುಬೇರ್, ಬಿಬಿ ಫಾತಿಮಾ, ನಾಮಿನಿ ಸದಸ್ಯ ವೆಂಕಟೇಶ್, ಕಾಯಿ ಕುಮಾರ್, ಶೃತಿ ಸನತ್, ಸಂದ್ಯಾಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)