
ತುಮಕೂರು: ವಿವಿಧ ಅಂಗವೈಕಲ್ಯತೆಯಿ0ದ ಸಮಾಜದ ಮುಖ್ಯವಾಹಿನಿಗೆ ಬರದೆ ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ದಿವ್ಯಾಂಗರಿಗೂ ಭವ್ಯ ಭವಿಷ್ಯವಿದೆ ಎಂಬುದನ್ನು ತಾವು ಸಾಬೀತು ಮಾಡಿರುವುದಾಗಿ ಅಂಧ ಮಹಿಳೆಯರ ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ತುಮಕೂರು ಜಿಲ್ಲೆಯ ಕಾವ್ಯ ಎನ್.ಆರ್. ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ತುಮಕೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಹುಟ್ಟಿನಿಂದ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಅಂಗವೈಕಲ್ಯ ರಾಗುವುದರಿಂದ ಧೃತಿಗೆಡುವ ಅವಶ್ಯಕತೆಯಿಲ್ಲ. ಅಂಗವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ಹೇಳಿದರು.
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂಧ ಮಹಿಳೆಯರ ಟಿ-೨೦ ವಿಶ್ವಕಪ್ ಚಾಂಪಿಯನ್ ಶಿಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ತಂಡದಲ್ಲಿದ್ದ ಕಾವ್ಯ ಅವರು, ಅಂತರರಾಷ್ಟ್ರೀಯ ಭಾರತ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮುನ್ನರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಕ್ರಿಕೆಟ್ ಆಡಿದ್ದು, ಇದೀಗ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದಲ್ಲಿ ಆಡಿರುವುದು ಅತ್ಯಂತ ಖುಷಿ ತಂದಿದೆ ಎಂದರು.
ಟಿ-೨೦ ವಿಶ್ವಕಪ್ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ಬಳಿಕ ದೇಶದಾದ್ಯಂತ ಎಲ್ಲರಿಂದ ಪ್ರಶಂಸೆ ಸಿಗುತ್ತಿದೆ. ದೇಶದ ಪ್ರಧಾ ನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ದೇಶಾದ್ಯಂತ ಎಲ್ಲರೂ ಅಭಿನಂದಿಸುತ್ತಿದ್ದಾರೆ ಎಂದ ಅವರು, ವಿಶೇಷಚೇತನರಿಗೆ ಬೆಂಬಲ ಅವಶ್ಯ. ಅದರಿಂದ ಯಾವು ದೇ ಸಾಧನೆ ಮಾಡಲು ಸಾಧ್ಯ ಎಂಬ ಅರಿವು ತಮಗಾಗಿದೆ ಎಂದರು.
ಬಾಲ್ಯದಲ್ಲಿ ಆಟವಾಡುತ್ತಿರುವಾಗ ಕಲ್ಲು ಸಿಡಿದು ಒಂದು ಕಣ್ಣು ಕಳೆದುಕೊಂಡೆ. ನಂತರ ತಮ್ಮ ಪೋಷಕರು ತೀವ್ರ ಸಂಕಟದಿ0ದ ಬಡತನದಲ್ಲಿ ಜೀವನ ಸಾಗಿಸುವ ಸ್ಥಿತಿಯಲ್ಲಿದ್ದುದರಿಂದ ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಶಾಲೆ ಬಿಡಬೇಕಾಯಿತು. ನಂತರ ಸಮರ್ಥನಂ ಸಂಸ್ಥೆ ಅಂಧ ಮಕ್ಕಳಿಗೆ ಸೌಲಭ್ಯದೊಂದಿಗೆ ತರ ಬೇತಿ ನೀಡುವ ವಿಷಯ ತಿಳಿದು ಪೋಷಕರು ಸಮರ್ಥನಂಗೆ ಕಳುಹಿಸಿದ್ದರಿಂದ ಇಂತಹ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿ ಸಲು ಕಾರಣವಾಯಿತು ಎಂದು ಸಮರ್ಥನಂ ಸಂಸ್ಥೆಯನ್ನು ಕಾವ್ಯ ಸ್ಮರಿಸುತ್ತಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಾಯಕನ ಪಾಳ್ಯದ ರಮೇಶ್ ಅವರ ಮಗಳಾದ ಕಾವ್ಯ ಎನ್.ಆರ್. ಅವರು ಸದ್ಯ ಸಮರ್ಥನಂ ಟ್ರಸ್ಟ್ನಲ್ಲಿ ಬಿ.ಎ. ಅಂತಿಮ ವರ್ಷದ ತರಗತಿಯಲ್ಲಿ ಓದುತ್ತಿದ್ದು, ಅಂಧರ ಕ್ರಿಕೆಟ್ ಸಂಸ್ಥೆಯಲ್ಲಿ ಕ್ರಿಕೆಟ್ ತರಬೇತಿ ಮುಂದುವರೆಸಿದ್ದಾರೆ.
ಬುದ್ಧಿಮಾಂದ್ಯರಾಗಿದ್ದ ಸಹೋದರ ಇತ್ತೀಚೆಗಷ್ಟೇ ಮೃತರಾ ಗಿದ್ದು, ಬಡತನದಲ್ಲಿ ಬದುಕು ಸಾಧಿಸುತ್ತಿರುವ ತಂದೆ-ತಾಯಿಗೆ ನೆರವಾಗಬೇಕೆಂಬ ಮಹದಾಸೆ ಹೊಂದಿದ್ದಾರೆ.
ಅಂಧ ಮಹಿಳೆಯರ ಟಿ-೨೦ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಮೂವರು ಕ್ರೀಡಾಪಟುಗಳಿಗೆ ತಲಾ ೧೦ಲಕ್ಷ ರೂ.ಗಳ ಬಹುಮಾನ ಹಾಗೂ ಉದ್ಯೋಗ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದು, ತಮ್ಮಂತಹ ಅಂಧರ ಬದುಕಿಗೆ ಈ ಭರವಸೆ ಬೆಳಕಾಗಿದೆ ಎಂದು ಅವರು ಕರ್ನಾಟಕ ಸರ್ಕಾರವನ್ನು ಸ್ಮರಿಸಿದರು.
ಅಂಧತ್ವ ಅಥವಾ ಇತರೆ ವಿಕಲಾಂಗರ ಶ್ರೇಯೋಭಿವೃದ್ಧಿಗಾಗಿ ಸಮರ್ಥನಂ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ದಿವ್ಯಚೇತನರು ಈ ಸಂಸ್ಥೆಯ ಪ್ರಯೋಜನವನ್ನು ಪಡೆದು ತಮ್ಮಂತೆ ದೇಶಕ್ಕೆ ಕೀರ್ತಿವಂತರಾಗಬಹುದು ಎಂದು ಕಾವ್ಯ ಅವರು ಆಶಾಭಾವನೆ ವ್ಯಕ್ತಪಡಿಸಿದರು.





