ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಸಮಗ್ರವಾಗಿ ಅನುಷ್ಠಾನ ಮಾಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಅರಿವು ಮೂಡಿಸಿ, ಕನಿಷ್ಠ ಶೇ.೭೫ರಷ್ಟು ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪುವಂತೆ ಮಾಡಿ ಇಲಾಖೆಯ ಗುರಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಅನೇಕ ಉರ್ದು ಶಾಲೆಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಳೆದ ಆರು ವರ್ಷಗಳಿಂದ ಬಾಡಿಗೆ ಪಾವತಿಸದಿರುವುದು ಮಕ್ಕಳಿಗೆ ತೊಂದರೆ ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಂತ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಕೇಂದ್ರ ಸರ್ಕಾರದ ಪಿ.ಎಂ.ಇ.ಜಿ.ಪಿ ಯೋಜನೆಯಡಿ ಕೈಗಾರಿಕೆ ಅಥವಾ ಉದ್ದಿಮೆ ಆರಂಭಿಸಲು ೫೦ ಲಕ್ಷ ರೂ.ವರೆಗೆ ಶೇ.೩೫ರಷ್ಟು ಸಹಾಯಧನದೊಂದಿಗೆ ಸಾಲ ಸೌಲಭ್ಯ ಲಭ್ಯವಿರುವುದರಿಂದ ನಾಗರಿಕರು ಇದನ್ನು ಸದುಪಯೋಗಪಡಿಸಿಕೊಳ್ಳಲು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಮಾದಕ ವಸ್ತುಗಳ ವ್ಯಸನಕ್ಕೆ ಯುವಕರು ಹೆಚ್ಚಾಗಿ ತುತ್ತಾಗುತ್ತಿದ್ದು, ರಾತ್ರಿ ವೇಳೆ ವಿವಿಧ ಪಾರ್ಕುಗಳಲ್ಲಿ ಯುವಕರು ಸೇರುತ್ತಿದ್ದಾರೆ ಎಂಬ ವಿಷಯವನ್ನು ಪ್ರಧಾನ ಮಂತ್ರಿಗಳ ೧೫ ಅಂಶಗಳ ಸಮಿತಿ ಸದಸ್ಯ ರೆಹಮಾನ್ ಅವರು ಸಭೆಯಲ್ಲಿ ಹೇಳಿದಾಗ, ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪಾರ್ಕುಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರ ಜೊತೆಗೆ ನೈಟ್ ಬೀಟ್‌ಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಸಭೆಯಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬೀರ್ ಅಹ್ಮದ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಈಶ್ವರಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಲಕ್ಷö್ಮಣ ಎಸ್. ಕಳ್ಳೆನ್ನವರ್, ಸೇರಿದಂತೆ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

(Visited 1 times, 1 visits today)