ಶಿರಾ: ಮದಲೂರು ಕೆರೆಗೆ ನೀರು ಹರಿಸಲು ದಿ. ಮುಖ್ಯಮಂತ್ರಿ ದೇವರಾಜ್ ಅರಸು ಅವರೇ ಮೂಲ ಕಾರಣ. ಅಂದು ಅವರು ತುಮಕೂರಿಗೆ ಹೇಮಾವತಿ ನೀರು ಹರಿಸಲು ಬಾಗೂರು ನವಿಲೆ ಸುರಂಗದ ಶಂಕುಸ್ಥಾಪನೆಗೆ ಬಂದಾಗ ತುಮಕೂರು ಜಿಲ್ಲೆಗೆ ನೀರು ಬರುತ್ತದೆ, ನೀನು ಅಧಿಕಾರ ಪಡೆದುಕೋ ಆಗ ಅಲ್ಲಿಂದ ಎಲ್ಲಿಗೆ ಬೇಕಾದರೂ ನೀರು ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದ್ದರು.ಶಿರಾ ತಾಲೂಕಿನಾದ್ಯಂತ ಹೇಮಾವತಿ ನೀರನ್ನು ಹರಿಸಿ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ ಎಂದು ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.
ಶಿರಾ ತಾಲೂಕಿನ ಮದಲೂರು ಕೆರೆಗೆ ದಂಪತಿ ಗಂಗಾ ಪೂಜೆಯೊಂದಿಗೆ , ಬಾಗಿನ ಅರ್ಪಿಸಿ ನಂತರ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಮಾನಿಗಳು ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಮಾತನಾಡಿದರು. ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ನೀರಾವರಿ ಮಂತ್ರಿಯಾಗಿದ್ದಾಗ ನಾನು ಕಳ್ಳಂಬೆಳ್ಳ ಕ್ಷೇತ್ರದ ಶಾಸಕನಾಗಿದ್ದೆ, ಹೇಮಾವತಿ ನೀರು ಹರಿಸಲು ಅವರು ಒಪ್ಪಿಗೆ ಸೂಚಿಸಿದಾಗ ಸಾಕಷ್ಟು ವಿರೋಧಗಳು ಕೇಳಿ ಬಂದವು,ಎಲ್ಲಾ ಅಡ ತಡೆಗಳ ನಡುವೆಯೂ ನಾನು ಕಳ್ಳಂಬೆಳ್ಳ ಕೆರೆಗೆ ಹಾಗೂ ಶಿರಾ ಕೆರೆಗೆ ನೀರು ಹರಿಸಿದೆ. ಕಳ್ಳಂಬೆಳ್ಳ ಮೂಲಕ ಮದಲೂರು ಕೆರೆಗೆ ನೀರನ್ನು ಹರಿಸಲು ತೆರೆದ ಚಾನೆಲ್ ನಿರ್ಮಾಣ ಮಾಡಲು ಅಂದು ಕೇಂದ್ರ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರಿಂದ ಈ ಯೋಜನೆಗೆ ಅನುಮೋದನೆ ಪಡೆದೆ. ಮೊದಲೂರು ಕೆರೆಗೆ ಕಾಲುವೆ ಆದ ನಂತರ, ಬರಗಾಲದ ಸಮಯದಲ್ಲೂ ಕೂಡ ೧೭ ದಿನಗಳ ಕಾಲ ಮದಲೂರು ಕೆರೆಗೆ ನೀರನ್ನು ಹರಿಸಿದೆ. ಕುಣಿಗಲ್ ತಾಲೂಕಿನವರು ಹೇಮಾವತಿ ನೀರಿನ ಹಂಚಿಕೆ ವಿಷಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದರು, ನಾನೇ ಸ್ವತಃ ವಾದ ಮಂಡಿಸಿ ಗೆಲುವು ಸಾಧಿಸಿದೆ.
ನಾನು ಶಿರಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬಂದಾಗ ಶಿರಾ ನಗರದಲ್ಲಿ ಕುಡಿಯುವ ನೀರಿನ ಆಹಾಕಾರವಿತ್ತು, ಆದರೆ ಇಂದು ತಾಲೂಕಿನ ೩೪ ಕೆರೆಗಳನ್ನು ಹಾಗೂ ೬೪ ಬ್ಯಾರೇಜ್ ಗಳನ್ನು ಹೇಮಾವತಿ ನೀರಿನಿಂದ ತುಂಬಿಸಿದ್ದೇನೆ, ರೈತರು ನಮ್ಮ ತಾಲೂಕಿನಲ್ಲಿ ಆರ್ಥಿಕವಾಗಿ ಸಬಲರಾಗಿದ್ದಾರೆ. ಶಿರಾ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತುತ್ತಿವೆ, ಸಾವಿರಾರು ಸಂಖ್ಯೆಯಲ್ಲಿ ಯುವಕರಿಗೆ ಉದ್ಯೋಗ ಸಿಗುವಂತಾಗಿದೆ. ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಹಾಗೂ ಹೇಮಾವತಿ ನೀರನ್ನು ತಾಲೂಕಿಗೆ ಹರಿಸುವುದರ ಮೂಲಕ ಗೌಡಗೆರೆ ಹುಲಿಕುಂಟೆ ಭಾಗದ ಪ್ರದೇಶಗಳಿಗೂ ಸಹ ನೀರನ್ನು ಹರಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿವಿಧಡೆಗಳಿಂದ ಉತ್ಸವದ ಮೂಲಕ ದೇವರುಗಳನ್ನು ಗಂಗಾ ಪೂಜೆಗೆ ತರಲಾಯಿತು. ಮದಲೂರಿಗೆ ಆಗಮಿಸಿದ ಜಯಚಂದ್ರ ದಂಪತಿಗಳಿಗೆ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿದ ನಂತರ ತೆಪ್ಪೋತ್ಸವದಲ್ಲಿ ದಂಪತಿ ಸಮೇತರಾಗಿ ಪಾಲ್ಗೊಂಡಿದ್ದರು.
ಪಾವಗಡ ತಾಲೂಕಿನ ಜನರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿ, ಮದಲೂರು ಕೆರೆ ತುಂಬಿರುವುದು ನಮ್ಮ ಭಾಗದಲ್ಲೂ ಕೂಡ ಅಂತರ್ಜಲ ವೃದ್ಧಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನೂರಾರು ಅಭಿಮಾನಿಗಳು ಮಾಲಾರ್ಪಣೆ ಮಾಡುವುದರ ಮೂಲಕ ಬರ ನಾಡಿನ ಭಗೀರಥ ಎಂದೆ ಖ್ಯಾತಿಯಾಗಿರುವ ಜಯಚಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಬೆಳ್ಳಿ ಕಿರೀಟ ತೊಡಿಸುವುದರ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಿರ್ಮಲ ಜಯಚಂದ್ರ, ಕಾಡುಗೊಲ್ಲ ನಿಗಮ ಮಂಡಳಿ ಅಧ್ಯಕ್ಷ ಹಾರೋಗೆರೆ ಮಹೇಶ್, ಕಾಂಗ್ರೆಸ್ ಯುವ ನಾಯಕ ಸಂಜಯ್ ಜಯಚಂದ್ರ, ಸೂಡ ಅಧ್ಯಕ್ಷ ಪಿ ಆರ್ ಮಂಜುನಾಥ್, ಸಿರಾ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬರಗೂರು ನಟರಾಜ್ , ನಗರಸಭೆ ಅಧ್ಯಕ್ಷ ಜಿಶನ್ ಮೊಹಮ್ಮದ್, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ. ಎಸ್ ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರ್ ಗೌಡ, ಶಿರಾ ಕುಂಚಿಟಿಗರ ಸಂಘದ ಅಧ್ಯಕ್ಷ ಮುಕುಂದಪ್ಪ, ಕಾಂಗ್ರೆಸ್ ಯುವ ಮುಖಂಡ ಡಿ.ಸಿ ಅಶೋಕ್, ಮದಲೂರು ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆಂಚಮಾರಯ್ಯ, ಮದಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ರೂಪ ರಂಗನಾಥ್, ಸಿರಾ ಗ್ಯಾರೆಂಟಿ ಯೋಜನೆ ಅಧ್ಯಕ್ಷ ನಾಗರಾಜಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪರ್ವತಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಕುಮಾರ್, ಮುಖಂಡರಾದ ಸಿ. ರಾಮಕೃಷ್ಣಪ್ಪ, ಲೋಕೇಶ್, ಗೋಣಿಹಳ್ಳಿ ದೇವರಾಜು, ಹಂದಿ ಕುಂಟೆ ನಾರಾಯಣಪ್ಪ, ಗುರುಮೂರ್ತಿ, ಗುಡ್ಡಯ್ಯ, ಪಿ.ಬಿ ನರಸಿಂಹಯ್ಯ, ಚಿರತಹಳ್ಳಿ ಮಂಜುನಾಥ್, ಕೆ ಆರ್ ಮಹೇಂದ್ರ ಗೌಡ, ಶೋಭಾ ನಾಗರಾಜ್, ಆಶಯ ಸಮಿತಿ ಸದಸ್ಯ ನೂರುದ್ದಿನ್, ಭೂವನಹಳ್ಳಿ ಸತ್ಯನಾರಾಯಣ, ನರೇಶ್ ಗೌಡ ಸೇರಿದಂತೆ ಸಿರಾ ತಾಲೂಕಿನ ಹಲವಾರು ಗ್ರಾಮಗಳ ಸಾವಿರಾರು ಜನ ಪಾಲ್ಗೊಂಡಿದ್ದರು.

(Visited 1 times, 1 visits today)