ತುಮಕೂರು: ಸಮಾಜದಲ್ಲಿ ಕ್ರೌರ್ಯ, ಅಹಿಂಸೆಯ ವಾತಾ ವರಣ ಹೆಚ್ಚುತ್ತಿದ್ದು, ಹಲವರು ಅಸುರಕ್ಷಿತ ವಾತಾವರಣದಲ್ಲಿ ಬದುಕು ತ್ತಿದ್ದಾರೆ. ಅಭದ್ರತೆಯಲ್ಲಿರುವ ಎಲ್ಲರಿಗೆ ಸುರಕ್ಷಿತ ವಾತಾವರಣ ಮೂಡಿಸಬೇಕಾಗಿದೆ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ಪ್ರತಿಪಾದಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಜನಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಸರಸ್ವತಿಪುರಂನ ಜೋಹ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯವೂ ಒಂದಲ್ಲಾ ಒಂದು ಕಡೆ ಅತ್ಯಾಚಾರ ಪ್ರಕರಣ, ಹೆಣ್ಣು ಮಕ್ಕಳ ಕೊಲೆ, ದೌರ್ಜನ್ಯ, ಶೋಷಣೆ ವರದಿಯಾಗುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಬೇಕಾದರೆ ಸಾಮಾಜಿಕವಾಗಿ ಚರ್ಚೆ ಮತ್ತು ಅರಿವಿನ ಕಾರ್ಯಕ್ರಮಗಳು ಹೆಚ್ಚಬೇಕಾಗಿದೆ ಎಂದರು.
ಭ್ರೂಣಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ನಿರಂತರವಾಗಿ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ ಪರಿಣಾಮ ಸಮಾಜದಲ್ಲಿ ಇಂದು ಲಿಂಗ ಅಸಮಾನತೆ ಮುಂದುವರಿದೇ ಇದೆ. ಕೆಲವು ವಾತಾವರಣದಲ್ಲಿ, ವರ್ಗಗಳಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಲ್ಲ ಎಂಬ ಮನೋಭಾವವಿದೆ. ಮೌಢ್ಯದ ಪರಮಾವಧಿ ಇನ್ನೂ ಮುಂದುವರೆದಿದೆ. ಇವುಗಳನ್ನು ವಿದ್ಯಾವಂತರಾದ ನಾವುಗಳು ತಪ್ಪಿಸಿ ಎಲ್ಲರೂ ಸಮಾನರು ಎಂಬುದನ್ನು ಸಾರಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಎಚ್.ಸುಕನ್ಯ ಮಾತನಾಡಿ ಮಹಿಳೆಯರು ಇಂದು ಮನೆಗೆ ಮಾತ್ರವೆ ಸೀಮಿತವಾಗಿಲ್ಲ. ಮನೆಯ ಹೊರಗೂ ದುಡಿಯುತ್ತಿದ್ದಾಳೆ. ಸ್ವಾಭಿಮಾನದ ಬದುಕು ಕಂಡುಕೊ0ಡಿದ್ದಾಳೆ. ಇದೆಲ್ಲದಕ್ಕೂ ಕಾರಣವಾಗಿರುವುದು ನಮ್ಮ ಕಲಿಕಾ ಶಿಕ್ಷಣ ವ್ಯವಸ್ಥೆ. ಶಿಕ್ಷಣವನ್ನು ಪಡೆಯುತ್ತಲೇ ಮಹಿಳೆಯರು ಮುಂದೆ ಬರಬೇಕಾಗಿದೆ. ಇದಕ್ಕಾಗಿ ಸಾಕಷ್ಟು ತರಬೇತಿಗಳು ಮತ್ತು ಅರಿವಿನ ಕಾರ್ಯ ಕ್ರಮಗಳಿದ್ದು, ಇವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಜನಶಿಕ್ಷಣ ಸಂಸ್ಥೆಯಿ0ದ ಡ್ರೆಸ್ ಮೇಕಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಮಾನವ ಹಕ್ಕುಗಳ ದಿನದ ಮಹತ್ವ ಕುರಿತು ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ವಿಶ್ವಾದ್ಯಂತ ಮಹಿಳೆಯರಿಗೆ ಮತದಾನ ಸೇರಿದಂತೆ ಕೆಲವು ಹಕ್ಕುಗಳನ್ನು ನಿರಾಕರಿಸಲಾಗಿತ್ತು. ಸಮಾನತೆ  ಇರಲಿಲ್ಲ. ಇದರ ಪರಿಣಾಮವಾಗಿಯೇ ೧೯೪೮ ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಮಾಡಿತ್ತು. ನಮ್ಮ ಭಾರತದ ಸಂವಿಧಾನದಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲೇಖಗಳಿವೆ. ಗೌರವಯುತ ಬದುಕಿಗೆ ಸಂವಿಧಾನದಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದ ಪರಿಣಾಮವಾಗಿಯೇ ಬಡವರಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿದೆ. ಇದರಿಂದಾಗಿ ಈಗ ಸಾಮಾಜಿಕ ಅಸಮತೋಲನ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲು ಕಾರಣವಾಗಿದೆ ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಪಾರ್ವತಮ್ಮ ಅವರು ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಮತ್ತು ಮಹಿಳೆ ಕುರಿತು ಮಾತನಾಡಿದರು. ವರದಕ್ಷಿಣೆ ವಿರೋಧಿ ವೇದಿಕೆಯ ಸದಸ್ಯರಾದ ಗಂಗಲಕ್ಷಿö್ಮ, ಮಾಣಿಕ್ಯ ಮತ್ತಿತರರು ಮಾನವ ಹಕ್ಕುಗಳ ಗೀತೆಗಳನ್ನು ಹಾಡಿದರು. ಅಫ್ರಿನ್ ಬೇಗ್, ವಾಣಿಶ್ರೀ ಮುಂತಾದವರು ಉಪಸ್ಥಿತರಿದ್ದರು.

(Visited 1 times, 1 visits today)