
ಕುಣಿಗಲ್: ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಪ್ರತಿಯೊಬ್ಬ ನಾಗರೀಕರ ಹಕ್ಕುಗಳನ್ನು ಗೌರವಿಸಬೇಕು. ಭಾರತೀಯ ಸಂವಿಧಾನವು ಮಾನವನ ಘನತೆ ಎತ್ತಿ ಹಿಡಿಯುವ ಹಲವಾರು ಮೌಲ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಮಾನವ ಹಕ್ಕುಗಳ ಪಾವಿತ್ರ‍್ಯತೆಯನ್ನು ಅರಿಯಬೇಕೆಂದು ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಂ.ಎಸ್.ನಾಗರಾಜು ಕರೆ ನೀಡಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ಭಾರತೀಯ ಸಂವಿಧಾನ ಮತ್ತು ಮಾನವೀಯ ಮೌಲ್ಯಗಳು ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಾರತೀಯ ಸಂವಿಧಾನವು ಮೂಲಭೂತ ಹಕ್ಕುಗಳನ್ನು ನೀಡುವ ಜೊತೆಗೆ ಎಲ್ಲರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ‍್ಯ, ಭ್ರಾತೃತ್ವ, ಮಾನವ ಘನತೆ, ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಸಹ ಉನ್ನತ ರಾಜಕೀಯ ಅಧಿಕಾರ ಪಡೆಯುವ ಅವಕಾಶ ನೀಡಿದೆ, ಯುವಜನರು ಸಂವಿಧಾನದತ್ತ ಮೌಲ್ಯಗಳ ಪಾಲಿಸಿ ಜವಾಬ್ದಾರಿಯುತ ಪ್ರಜೆಗಳಾಗಿ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಧಾಕೃಷ್ಣ ಮಾತನಾಡಿ ಮಾನವಹಕ್ಕುಗಳನ್ನು ಎಲ್ಲರೂ ಗೌರವಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನ ಎಂದರಿಯಬೇಕು. ತಾರತಮ್ಯ ರಹಿತ ಸಮಾಜ ನಿರ್ಮಾಣ ಮಾಡಲು ಸಂವಿಧಾನ ಮುಕ್ತ ಅವಕಾಶ ನೀಡಿದೆ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಶಿಕ್ಷಣವು ಮಾನವ ವ್ಯಕ್ತಿತ್ವದ ಬೆಳವಣಿಗೆಗೆ ನೆರವಾಗುತ್ತದೆ. ಮಾನವ ಹಕ್ಕುಗಳು ಮೂಲಭೂತ ಸ್ವಾತಂತ್ರ‍್ಯದ ಗೌರವವಪ್ನು ಬಲಪಡಿಸಿ, ಸಹಿಷ್ಣುತೆ ಮತ್ತು ಸ್ನೇಹ ವನ್ನು ಉತ್ತೇಜಿಸಿಸಿ ಶಾಂತಿಯನ್ನು ಕಾಪಾಡುತ್ತದೆ. ಆದುದರಿಂದ ಭಾರತೀಯ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ ಎನಿಸಿದೆ. ವಿದ್ಯಾರ್ಥಿಗಳು ಮಾನವ ಹಕ್ಕುಗಳ ಅರಿತು ಜೀವನ ರೂಪಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಎಂ.ಕೆ.ಮ0ಜುಳ ಮಾತನಾಡಿ ಮಾನವರನ್ನು, ಮಾನವರನ್ನಾಗಿ ನೋಡಬೇಕು. ತನ್ನ ಹಕ್ಕುಗಳು ಮತ್ತು ಸ್ವಾತಂ ತ್ರ‍್ಯಗಳನ್ನು ಚಲಾಯಿಸುವಾಗ, ಇತರರ ಹಕ್ಕುಗಳು ಮತ್ತು ಸ್ವಾತಂತ್ರ‍್ಯಗಳಿಗೆ ಸರಿಯಾದ ಮನ್ನಣೆ ಮತ್ತು ಗೌರವ ನೀಡಬೇಕು. ಪ್ರಜಾಪ್ರಭುತ್ವ ಸಮಾಜದಲ್ಲಿ ನೈತಿಕತೆ, ಸಾರ್ವಜನಿಕ ಸುವ್ಯವಸ್ಥೆ, ನ್ಯಾಯಯುತ ಅವಶ್ಯಕತೆಗಳನ್ನು ಅರಿತು ಜೀವನ ಮಾಡಬೇಕು. ವಿದ್ಯಾರ್ಥಿಗಳು ಇತರರ ಹಕ್ಕುಗಳನ್ನು ಗೌರವಿಸುವುದು ಕಲಿಯಬೇಕೆಂದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಎಂ.ಟಿ.ಈಶ್ವರಪ್ಪ ಮಾತನಾಡಿದರು. ಅಧ್ಯಾಪಕ ಡಾ.ಧರಣೇಶ್ ಕಾರ್ಯಕ್ರಮ ನಿರೂಪಿಸಿ, ಪೃಥ್ವಿರಾಜ್ ವಂದಿಸಿದರು.





