
ತುಮಕೂರು: ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಚಿರತೆ ದಾಳಿಗೆ ತುತ್ತಾಗಿ ಮೃತಪಟ್ಟ ಸುಜಾತ (೪೮) ಅವರ ಕುಟುಂಬಕ್ಕೆ ಸೋಮ ವಾರ ೫ ಲಕ್ಷ ರೂ.ಗಳ ತಾತ್ಕಾಲಿಕ ಪರಿಹಾರ ಚೆಕ್ಕನ್ನು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ವಿತರಿಸಿದರು.
ಮೃತರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಸೋಮವಾರ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಉಳಿದ ೧೫ ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಮುಂದಿನ ಎರಡು ವಾರಗಳಲ್ಲಿ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.
ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುರುವೇಕೆರೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಉಪವಿಭಾಗ ಮಟ್ಟದಲ್ಲಿ ಚಿರತೆ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ವಿಶೇಷ ‘ಟಾಸ್ಕ್ ಫೋರ್ಸ್’ ಸಮಿತಿ ರಚಿಸಿ, ದಾಳಿ ನಡೆದ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಬೀಡು ಬಿಟ್ಟು, ಕೂಡಲೇ ಚಿರತೆಯನ್ನು ಸೆರೆ ಹಿಡಿಯಲು ವ್ಯಾಪಕ ಕೋಂಬಿ0ಗ್ ನಡೆಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಕಸ ವಿಲೇವಾರಿ ವಾಹನಗಳ ಮೂಲಕ ಚಿರತೆ ಹಾವಳಿ ಬಗ್ಗೆ ಸಾರ್ವಜ ನಿಕರಲ್ಲಿ ಅರಿವು ಮೂಡಿಸುವುದು, ಸಾರ್ವಜನಿಕರು ಬೆಳಗಿನ ಜಾವ ಹಾಗೂ ಸೂರ್ಯಾಸ್ತದ ನಂತರ ತೋಟಗಳಿಗೆ ತೆರಳದಂತೆ ನಿರ್ದೇಶನ ನೀಡಿದರಲ್ಲದೇ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ೯೪೪೯೮ ೭೨೫೯೯ (ಸ್ಮಾರ್ಟ್ ಸಿಟಿ ಸಹಾಯವಾಣಿ) ಸಂಖ್ಯೆಯನ್ನು ೨೪/೭ ಸಂಪರ್ಕಿಸಬಹುದು ಎಂದು ತಿಳಿಸಿದರು.
ಮೃತರ ಇಬ್ಬರು ಮಕ್ಕಳಲ್ಲಿ ಒಬ್ಬರ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ೪,೦೦೦ ರೂ.ಗಳ ಧನಸಹಾಯ ಹಾಗೂ ಅರ್ಹತೆಗನುಗುಣವಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಕೆಲಸ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಕುಂಞ ಅಹಮದ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



