ತುಮಕೂರು: ಸಂವಿಧಾನದ ಆಶಯದಂತೆ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಮೂಲಕ ಸಾರ್ವಜನಿಕರಿಗೆ ಸಿಗಬೇಕಾದ ಹಕ್ಕುಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದೇ ನಿಜವಾದ ಉತ್ತಮ ಆಡಳಿತ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೇಳಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉತ್ತಮ ಆಡಳಿತ ವಾರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಸ್ಪಂದಿಸಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಮತ್ತು ಮಾಹಿತಿಯನ್ನು ಅತಿ ವೇಗವಾಗಿ ತಲುಪಿಸುವುದೇ ಅತ್ಯುತ್ತಮ ಸೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು ೧,೧೧೦ ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದು, ಇದರ ಪ್ರಯೋಜನ ಸುಮಾರು ೧೮ ಸಾವಿರ ಕುಟುಂಬಗಳಿಗೆ ಲಭ್ಯವಾಗಲಿದೆ. ಅಲ್ಲದೆ ಜಿಲ್ಲೆಯು ಅತಿ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ರಾಜ್ಯದಲ್ಲೇ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಜಿಲ್ಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವೇಗ ನೀಡಲಾಗುತ್ತಿದ್ದು, ತುಮಕೂರು-ರಾಯದುರ್ಗ ರೈಲ್ವೆ ೨೦೦೯ರ ಕೇಂದ್ರ ಬಜೆಟ್‌ನಲ್ಲಿ ಅನುಮೋದನೆಯಾಗಿದ್ದು, ಈ ಕಾಮಗಾರಿಗೆ ಸಂಬ0ಧಿಸಿದ ಭೂಸ್ವಾಧೀನ ಪ್ರಕ್ರಿಯೆಯು ಸಚಿವರ ನಿರ್ದೇಶನದಂತೆ ಈಗ ಅತ್ಯಂತ ವೇಗವಾಗಿ ನಡೆಯುತ್ತಿದೆ. ರೈಲ್ವೆ ಹಾಗೂ ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರದ ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಪ್ರಕ್ರಿಯೆಯನ್ನು ಒಂದು ಆಂದೋಲನದ0ತೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜನಸಂಪರ್ಕ ಸಭೆಗಳಲ್ಲಿ ಹೆಚ್ಚಾಗಿ ಕಂಡುಬ0ದ ಪಡಿತರ ಚೀಟಿ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲೆಯ ೫೦ ಹೋಬಳಿಗಳಲ್ಲಿ ‘ಆಹಾರ ಅದಾಲತ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ಯತೆಯ ಮೇರೆಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಅಧಿಕಾರಿಗಳ ಸಹಕಾರವಿಲ್ಲದೆ ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಬೇಕು. ಸಾರ್ವಜನಿಕರ ಸೇವೆ ಮಾಡಲು ನಿಮಗೆ ಇದೊಂದು ಉತ್ತಮ ಅವಕಾಶ. ಉತ್ತಮ ಆಡಳಿತದ ರಾಯಭಾರಿಗಳಾಗಿ ನೀವು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ ಉತ್ತಮ ಆಡಳಿತವು ಮೂರು ಪ್ರಮುಖ ಸ್ಥಂಭಗಳ ಮೇಲೆ ನಿಂತಿದೆ. ಸಾಮಾನ್ಯ ಜನರ ಸಮಸ್ಯೆಗಳಿಗೆ ಕಿವಿಗೊಡುವುದು ಮತ್ತು ಸಮಯಕ್ಕೆ ಸರಿಯಾಗಿ ಪರಿಹಾರ ನೀಡುವುದು. ಆಡಳಿತದ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಇರುವುದು ಉತ್ತಮ ಆಡಳಿತ ಎಂದು ಹೇಳಿದರು.
ಸಂವಿಧಾನದ ಮೂರು ಪ್ರಮುಖ ಅಂಗಗಳಲ್ಲಿ ಕಾರ್ಯಾಂಗವು ಅತ್ಯಂತ ಪ್ರಮುಖವಾಗಿದೆ. ಕಾನೂನುಗಳು ಮತ್ತು ಯೋಜನೆಗಳು ಕೇವಲ ಕಡತಗಳಲ್ಲಿ ಉಳಿಯದೆ. ಅವುಗಳಿಗೆ ಸ್ವರೂಪ ಕೊಟ್ಟು, ಅಂತಿಮ ಫಲಾನುಭವಿಯ ಕೈಗೆ ತಲುಪಿಸುವ ಜವಾಬ್ದಾರಿ ಕಾರ್ಯಾಂಗದ್ದಾಗಿದೆ ಎಂದು ಹೇಳಿದರು.
ಅಧಿಕಾರಿಗಳಿಗೆ ಕಾನೂನು ಅಥವಾ ಕಾಯ್ದೆಗಳ ಬಗ್ಗೆ ಮಾಹಿತಿ ಇಲ್ಲದಿದ್ದರೆ, ಅದನ್ನು ತರಬೇತಿಯ ಮೂಲಕ ಕಲಿಸಬಹುದು ಆದರೆ ಕೆಲಸ ಮಾಡುವ ಮನಸ್ಥಿತಿಯೇ ಇಲ್ಲದಿದ್ದರೆ, ಅದನ್ನು ಯಾರೂ ತಿದ್ದಲು ಸಾಧ್ಯವಿಲ್ಲ, ಆಡಳಿತದಲ್ಲಿ ಅಧಿಕಾರಿಗಳ ವರ್ತನೆ ಬಹಳ ಮುಖ್ಯ. ಬಡವರ ಪರವಾಗಿ ಕೆಲಸ ಮಾಡುವ ಮನಸ್ಥಿತಿ ಬರಬೇಕು. ಆಡಳಿತ ವ್ಯವಸ್ಥೆಯಲ್ಲಿ ಇರುವವರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ, ನೈಜ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಿದ್ದಗಂಗಾ ಮಠದ ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ ಅವರು ಮಾತನಾಡಿ, ಆಡಳಿತ ಎಂದರೆ ಕೇವಲ ಕಚೇರಿ ಕೆಲಸವಲ್ಲ, ಅದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೇವೆ. ಕಚೇರಿಗೆ ಬರುವ ಪ್ರತಿಯೊಬ್ಬ ನಾಗರಿಕನಿಗೂ ಗೌರವ ನೀಡುವುದು ಅಧಿಕಾರಿಯ ಮೊದಲ ಆದ್ಯತೆಯಾಗಿರಬೇಕು. ಒಬ್ಬ ವ್ಯಕ್ತಿ ಸಮಸ್ಯೆ ಹೊತ್ತು ಬಂದಾಗ ಅವರಿಗೆ ಸಮಾಧಾನದಿಂದ ಆಲಿಸುವ ಮನೋಭಾವ ಇರಬೇಕು ಎಂದು ತಿಳಿಸಿದರು.
ನಾಗರಿಕರ ಸಮಸ್ಯೆಗಳನ್ನು ಬಾಕಿ ಉಳಿಸಿಕೊಳ್ಳದೆ, ಕಾನೂನಿನ ಚೌಕಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಹರಿಸಬೇಕು. ವಿಳಂಬ ಆಡಳಿತದ ವೈಫಲ್ಯದ ಸಂಕೇತ ಎಂದು ಹೇಳಿದರು. ಜನರು ಸಣ್ಣಪುಟ್ಟ ಕೆಲಸಗಳಿಗೂ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ನಿಯಮಿತವಾಗಿ ಜನಸ್ಪಂದನ ಸಭೆಗಳನ್ನು ನಡೆಸುವ ಮೂಲಕ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಹೋಗುವಂತರಾಗಬೇಕು ಇದೇ ಜನಸ್ನೇಹಿ ಆಡಳಿತ ಎಂದರು.
ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಅಬಿವೃದ್ಧಿ) ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

(Visited 1 times, 1 visits today)