
ತುಮಕೂರು: ಅಂತರ್ಜಾಲದಲ್ಲಿರುವುದೆಲ್ಲ ಸತ್ಯವಲ್ಲ. ಯುವಬರಹಗಾರರರು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡ ಬಳಿಕವೇ ಅಲ್ಲಿನ ಮಾಹಿತಿಯನ್ನು ತಮ್ಮ ಲೇಖನಗಳಲ್ಲಿ ಬಳಸಿಕೊಳ್ಳಬೇಕು ಎಂದು ಅಂಕಣಕಾರ, ಪತ್ರಕರ್ತ ಎ. ಆರ್. ಮಣಿಕಾಂತ್ ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಮಂಗಳವಾರ ಹಮ್ಮಿಕೊಂಡಿದ್ದ ‘ಅಂಕಣ-ನುಡಿಚಿತ್ರ ಬರವಣಿಗೆ’ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಬೇಕು ಎಂಬ ಹಂಬಲ ಯುವಕರಿಗೆ ಇದೆ. ಆದರೆ ಅದಕ್ಕೆ ಬೇಕಾದ ಸಿದ್ಧತೆ ಕಡಿಮೆ. ವಿದ್ಯಾರ್ಥಿಗಳು ವಿಸ್ತಾರವಾದ ಓದಿಗೆ ತಮ್ಮನ್ನು ತೆರೆದುಕೊಳ್ಳಬೇಕು. ಕೃತಕಬುದ್ಧಿಮತ್ತೆ ಹಾಗೂ ಅಂತರ್ಜಾಲದ ಮಾಹಿತಿ ಆ ಧರಿಸಿ ಬರೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಮಾಹಿತಿಯನ್ನು ಪರಿಶೀಲಿಸಿ ಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಅ0ಕಣಕಾರನಿಗೆ ತುಂಬ ತಾಳ್ಮೆ ಇರಬೇಕು. ಒಂದು ವಿಷಯದ ಸಂಪೂರ್ಣ ಮಾಹಿತಿ ಸಿಗುವವರೆಗೆ ಮತ್ತು ಅದು ಆತನಿಗೆ ತೃಪ್ತಿ ತರುವವರೆಗೆ ಪ್ರಕಟಿಸಲು ಅವಸರ ಮಾಡಕೂಡದು. ಸೂಕ್ಷö್ಮ ಮನಸ್ಸು, ಕಥೆಗಳನ್ನು ಕೇಳುವ ಸಹೃದಯತೆ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಜಿ. ದಾಕ್ಷಾಯಿಣಿ ಮಾತನಾಡಿದರು.
ವಿಭಾಗದ ಮುಖ್ಯಸ್ಥ ಸಿಬಂತಿ ಪದ್ಮನಾಭ ಮಾತನಾಡಿ, ಮಣಿಕಾಂತ್ ಕನ್ನಡ ಪುಸ್ತಕೋದ್ಯಮದಲ್ಲಿ ಹೊಸತೊಂದು ದಾಖಲೆ ಸೃಷ್ಟಿಸಿದ್ದಾರೆ. ಅವರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ಎರಡು ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಣಿಕಾಂತ್ ತಮ್ಮ ಅಂಕಣಗಳಲ್ಲಿ ಯಶೋಗಾಥೆಗಳನ್ನು ಬರೆಯುವ ಮೂಲಕ ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ದರ್ಶನ್, ಅಜಯ್, ಭೂಮಿಕಾ ಶಂಕರ್, ಶ್ರೀವಾಸ್ ಮಣಿಕಾಂತ್ ಅವರೊಂದಿಗೆ ಸಂವಾದ ನಡೆಸಿದರು. ಹಿರಿಯ ವಿದ್ವಾಂಸ ಡಾ. ಎಸ್. ಪಿ. ಪದ್ಮಪ್ರಸಾದ್, ಪತ್ರಿಕೋದ್ಯಮ ಉಪನ್ಯಾಸಕರಾದ ಡಾ. ಗಿರಿಜಮ್ಮ ಜಿ., ಡಾ.ಪೃಥ್ವಿರಾಜ ಟಿ., ಡಾ. ಸುಲೋಚನ ಜಿ.ಎಸ್., ಪ್ರವೀಣ್ ಕುಮಾರ್ ಎನ್., ಚನ್ನಬಸವ ಎಂ., ವಿಷ್ಣುಧರನ್, ವಿಶಾಲ್ ಮಯೂರ್ ಉಪಸ್ಥಿತರಿದ್ದರು.



