ತುರುವೇಕೆರೆ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆ, ತಾಲ್ಲೂಕು ಹಿರಿಯ ನಾಗರೀಕರ ದಿನಾಚರಣೆ ಹಾಗೂ ೭೫ವರ್ಷ ಮೇಲ್ಪಟ್ಟ ಹಿರಿಯ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಸೋಮವಾರ ಪಟ್ಟಣದ ಹೊರಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾ.ಹಾ.ರಮಾಕುಮಾರಿ ಉದ್ಘಾಟನಾ ನುಡಿಗಳನ್ನಾಡುತ್ತಾ ನಾವೆಲ್ಲಾ ಸಂಘಟಿತರಾಗುವ ಮೂಲಕ ನಮ್ಮ ಅಸ್ಥಿತ್ವ ಏನೆಂಬುದನ್ನು ತೋರಿಸಿಕೊಳ್ಳಬೇಕಾಗಿದೆ. ನಮಗೆ ಮುಖ್ಯವಾದ ೨ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಾಗಿದ್ದು ಸರ್ಕಾರದ ಗ್ಯಾರಂಟಿ ಯೋಜನೆಯಿಂದ ನಮ್ಮ ಬೇಡಿಕೆಗಳಿಗೆ ಹಿನ್ನಡೆಯಾಗುತ್ತಿದೆ. ನಮ್ಮ ಬೇಡಿಕೆಗಳು ಈಡೇರಬೇಕಾದರೆ ನಮ್ಮ ಸಂಘಟನಾ ಶಕ್ತಿ ಏನೆಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲೋಸ್ಕರ ನಿವೃತ್ತ ನೌಕರರು ಸಂಘದಲ್ಲಿ ಹೆಚ್ಚೆಚ್ಚು ನೋಂದಣಿ ಮಾಡಿಕೊಂಡು ಸಂಘಟಿತರಾಗುವ ಮೂಲಕ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾಗಿದೆಯಲ್ಲದೆ ಸಾರ್ವಜನಿಕರ ಕಂದಾಯದ ಹಣ ನಮಗೆ ಪಿಂಚಣಿ ರೂಪದಲ್ಲಿ ಬರುತ್ತಿದ್ದು ನಾವುಗಳೂ ಸಹಾ ನಮ್ಮ ಕೈಲಾದಷ್ಟು ಸಮಾಜದಲ್ಲಿ ಕಿಂಚಿತ್ತಾದರೂ ಸೇವೆ ಮಾಡುವ ಮೂಲಕ ನಾವುಗಳು ಋಣಮುಕ್ತರಾಗೋಣವೆಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪ್ರಭಾರ ಅಧ್ಯಕ್ಷ ಷಣ್ಮುಖಪ್ಪ ಮಾತನಾಡುತ್ತಾ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳನ್ನಾಗಿ ಮಾಡುವಂತ ಪೋಷಕರನ್ನು ಮಕ್ಕಳು ಚೆನ್ನಾಗಿ ಆರೈಕೆ ಮಾಡುವ ಮೂಲಕ ಅವರಲ್ಲಿರತಕ್ಕಂತ ಒಂಟಿತನ ಹೋಗಲಾಡಿಸುವುದು ಕುಟುಂಬದವರ ಕರ್ತವ್ಯವಾಗಿದೆ. ನೌಕರರು ಕರ್ತವ್ಯದಿಂದ ನಿವೃತ್ತರಾದ ಬಳಿಕ ಇಂತಹ ಸಂಘಸ0ಸ್ಥೆಗಳಲ್ಲಿ ತೊಡಗಿಸಿಕೊಂಡಲ್ಲಿ ನಮ್ಮಲ್ಲಿರುವ ಏಕಾಗ್ರತೆ ದೂರಾಗಿ ದೇಹಕ್ಕೆ ಚೈತನ್ಯ ಸಿಗಲಿದ್ದು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಜೊತೆಗೆ ಆಸ್ತಿ, ಹಣ ಜೋಪಾನ ಮಾಡಿಕೊಂಡಲ್ಲಿ ಸಂದ್ಯಾ ದಿನಗಳಲ್ಲಿ ಆಸರೆಯಾಗಲಿದೆ ಎಂದರು.
ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಅರಳೀಕೆರೆ ಶಿವಯ್ಯನವರ ಅಧ್ಯಕ್ಷತೆಯಲ್ಲಿ ಸಮಾರಂಭ ನೆರವೇರಿತು. ೨೦೨೪-೨೫ನೇ ಸಾಲಿನ ಲೆಕ್ಕಪತ್ರವನ್ನು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆಂಪಲಿ0ಗೇಗೌಡ ಮಂಡಿಸಿದರು. ಇದೇ ಸಂಧರ್ಭದಲ್ಲಿ ೭೫ ವರ್ಷ ಮೇಲ್ಪಟ್ಟ ನಿವೃತ್ತ ಸದಸ್ಯರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ರಾ.ಸ.ನಿ.ನೌ.ಸಂ. ಬೆಂ. ಸಂಘಟನಾ ಕಾರ್ಯದರ್ಶಿ ಪ್ರಹ್ಲಾದ್, ಜಂಟಿ ಕಾರ್ಯದರ್ಶಿ ಕೆ.ರಾಜಯ್ಯ, ತಾ.ಉಪಾಧ್ಯಕ್ಷ ಹೆಚ್.ಎಲ್.ಸಿದ್ದಯ್ಯ, ಖಜಾಂಚಿ ಹಾ.ಜ.ನಾರಾಯಣ್, ರಾಜ್ಯ ಪರಿಷತ್ ಸದಸ್ಯ ಸಿ.ಪಿ.ಪ್ರಕಾಶ್ ಸೇರಿದಂತೆ ಇತರೆ ತಾಲ್ಲೂಕುಗಳ ಪದಾಧಿಕಾರಿಗಳು, ತಾ.ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಗಲಿದ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು. ಸಿ.ಪಿ.ಪ್ರಕಾಶ್ ಸ್ವಗತಿಸಿ, ಎಂ.ಎಲ್.ಬೈರುವೇಗೌಡ ನಿರೂಪಿಸಿ, ರಾಮಯ್ಯ ವಂದಿಸಿದರು. ಪಾಲ್ಗೊಂಡಿದ್ದ ಸದಸ್ಯರುಗಳಿಗೆ ಸಂಘದ ವತಿಯಿಂದ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.

(Visited 1 times, 1 visits today)