
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಕರ್ನಾಟಕ ಬ್ಯಾಂಕ್, ವಿವೇಕಾನಂದ ರಸ್ತೆ ಶಾಖೆಯಲ್ಲಿ ಉತ್ತಮ ಆಡಳಿತ ವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯ ಅಭಿಯಾನ ವ್ಯವಸ್ಥಾಪಕ ದೊಡ್ಡವಲಪ್ಪ ಮಾತನಾಡಿ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿ.ಎಂ. ಸ್ವ-ನಿಧಿ) ಯೋಜನೆಯನ್ನು ೨೦೨೦ರಲ್ಲಿ ಕರೋನ ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ಜಾರಗೊಳಿಸಿತ್ತು. ಬೀದಿ ವ್ಯಾಪಾರಿಗಳು ಬ್ಯಾಂಕ್ ಮೂಲಕ ಮೊದಲನೇ ಹಂತದಲ್ಲಿ ರೂ.೧೦,೦೦೦/- ಸಾಲ ಪಡೆದು ಒಂದು ವರ್ಷದೊಳಗೆ ಮರುಪಾವತಿ ಮಾಡಿದ ನಂತರ ಎರಡನೇ ಹಂತದಲ್ಲಿ ರೂ.೨೦,೦೦೦/- ಸಾಲ ಪಡೆಯಬ ಹುದು, ಎರಡನೇ ಹಂತದ ಸಾಲವನ್ನು ಹದಿನೆಂಟು ತಿಂಗಳಲ್ಲಿ ಮರುಪಾವತಿ ಮಾಡಿ ಮೂರನೇ ಹಂತದಲ್ಲಿ ರೂ.೫೦೦೦೦/- ಸಾಲ ಪಡೆಯಬಹುದು, ಶೇ.೭ ರಷ್ಟು ಬಡ್ಡಿ ಸಹಾಯಧನ ಹಾಗೂ ಡಿಜಿಟಲ್ ವ್ಯವಹಾರ ಮಾಡಿದರೆ ಪ್ರತಿ ತಿಂಗಳೂ ಪ್ರತ್ಸಾಹ ಧನ ರೂ.೧೦೦/- ರವರೆಗೆ ಪಡೆಯಬಹುದಾಗಿದೆ.
ಪ್ರಸ್ತುತ ಡಿಸೆಂಬರ್ ೨೦೨೪ಕ್ಕೆ ಯೋಜನೆ ಮುಕ್ತಾಯವಾಗಿತ್ತು. ಪ್ರಸ್ತುತ ಸೆಪ್ಟೆಂಬರ್ ೨೦೨೫ ರಿಂದ ೨೦೩೦ರ ವರೆಗೆ ಯೋಜನೆಯನ್ನು ವಿಸ್ತರಿಸಿದ್ದು, ಮೊದಲನೇ ಹಂತದಲ್ಲಿ ರೂ.೧೫೦೦೦/-, ಎರಡನೇ ಹಂತದಲ್ಲಿ ರೂ.೨೫೦೦೦/- ಮತ್ತು ಮೂರನೇ ಹಂತದಲ್ಲಿ ರೂ.೫೦೦೦೦/-ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಡ್ಡಿ ಸಹಾಯಧನ ಮತ್ತು ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹಧನ ಪಡೆಯಲು ಅವಕಾಶವಿದೆ. ಎರಡನೇ ಹಂತದ ಸಾಲವನ್ನು ಮರುಪಾವತಿ ಮಾಡಿರುವ ಬೀದಿ ವ್ಯಾಪಾರಿಗಳಿಗೆ ರೂ.೩೦೦೦೦/- ರವರೆಗೆ ಕ್ರೆಡಿಟ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಿರುವ ಬಗ್ಗೆ ಕಾರ್ಯಕ್ರಮದಲ್ಲಿ ಹಾಜರಿದ್ದ, ಬೀದಿ ವ್ಯಾಪಾರಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.
ತನೂಜ್ ಕುಮಾರ್, ಸಹಾಯಕ ಶಾಖಾ ವ್ಯವಸ್ಥಾಪಕರು, ಇವರು ೧೧ ಜನ ಬೀದಿ ವ್ಯಾಪಾರಿಗಳಿಗೆ ಸಾಲ ಬಿಡುಗಡೆ ಪತ್ರ ವಿತರಿಸಿ. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ, ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಬೀದಿ ವ್ಯಾಪಾರಿಗಳಿಗೆ ತಿಳಿಸಿದರು. ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ವಸೀಂ ಅಕ್ರಂ ರವರು ಪಿ.ಎಂ. ಸ್ವ-ನಿಧಿ ಯೋಜನೆಯಿಂದ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಸಾಲ ಪಡೆದು ವ್ಯಾಪಾರವನ್ನು ನಡೆಸಲು ಮತ್ತು ಜೀವನೋಪಾಯಕ್ಕೆ ಸಹಾಯವಾಗಿದೆ. ಎಲ್ಲಾ ಬೀದಿ ವ್ಯಾಪಾರಿಗಳು ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು. ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಡೇ-ನಲ್ಕ್ ಶಾಖೆಯ ಸಿಬ್ಬಂದಿವರ್ಗ, ಬೀದಿ ವ್ಯಾಪಾರಿಗಳು ಹಾಜರಿದ್ದರು.
ತುಮಕೂರು ಜಿಲ್ಲೆಯಲ್ಲಿ ೧೧೩೦೦ ಬೀದಿ ವ್ಯಾಪಾರಿಗಳಿಗೆ ಮೊದಲನೇ ಹಂತದಲ್ಲಿ ರೂ.೧೦೦೦೦/-ಗಳು, ೫೨೦೦ ಬೀದಿ ವ್ಯಾಪಾರಿಗಳಿಗೆ ಎರಡನೇ ಹಂತದಲ್ಲಿ ರೂ.೨೦೦೦೦/-ಗಳು, ೧೮೦೦ ಬೀದಿ ವ್ಯಾಪಾರಿಗಳಿಗೆ ಮೂರನೇ ಹಂತದಲ್ಲಿ ರೂ.೫೦೦೦೦/-ಗಳು ಸಾಲ ಬಿಡುಗಡೆಯಾಗಿದ್ದು, ಶೇ.೭೫ರಷ್ಟು ಮರುಪಾವತಿ ಆಗಿರುತ್ತದೆ. ಶೇ.೭೨ರಷ್ಟು ಬೀದಿ ವ್ಯಾಪಾರಿಗಳು ಡಿಜಿಟಲ್ ವ್ಯವಹಾರ ಮಾಡುತ್ತಿದ್ದಾರೆ. ಒಟ್ಟಾರೆ ಈ ಯೋಜನೆಯು ಜಿಲ್ಲಾಡಳಿತ, ನಗರ ಸ್ಥಳೀಯ ಸಂಸ್ಥೆಗಳು, ಬ್ಯಾಂಕುಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ ಎಂದು ಅಭಿಯಾನ ವ್ಯವಸ್ಥಾ ಪಕರಾದ ಶ್ರೀ ದೊಡ್ಡವಲಪ್ಪ ರವರು ಮಾಹಿತಿ ನೀಡಿದರು.



