
ತುಮಕೂರು: ಎಲ್ಲರೂ ಚೆನ್ನಾಗಿರಬೇಕು ಎಂಬ ಭಾವನೆ ಭಾರತೀಯರದ್ದು, ಜಗತ್ತಿಗೇ ಹಿತ ಬಯಸುವವರು ಯಾರಾದರೂ ಇದ್ದರೆ ಅವರು ಭಾರತೀಯರು ಮಾತ್ರ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ದೇಶಪ್ರೇಮ, ಪರಿಸರ ಪ್ರೇಮ, ನಾಗರೀಕ ಶಿಷ್ಟಾಚಾರಗಳನ್ನು ಅನುಸರಿಸುವ ಸಂಬ0ಧ ಹಿಂದೂ ಸಮಾಜೋತ್ಸವ ಸಮಿತಿ ನಗರದ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯ ಕ್ರಮಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸಮಿತಿಯ ಗೌರವಾಧ್ಯಕ್ಷರೂ ಆದ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಬುಧವಾರ ಸಿದ್ಧಗಂಗಾ ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ದೇಶ ಚೆನ್ನಾಗಿರಬೇಕು ಎಂದರೆ ಕುಟುಂಬ ಚೆನ್ನಾಗಿರಬೇಕು. ಇಂದು ಕುಟುಂಬ ವ್ಯವಸ್ಥೆ ಶಿಥಿಲ ವಾಗುತ್ತಿದೆ. ಕುಟುಂಬಗಳಲ್ಲೇ ಸಹಕಾರವಿಲ್ಲ, ಶಾಂತಿ, ನೆಮ್ಮದಿಯಿಲ್ಲ, ಇರುವ ನಾಲ್ಕು ಜನರೇ ನಾಲ್ಕು ಮುಖಗಳಾಗಿ ಕುಳಿತುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ದೇಶ ಸರಿಹೋಗಬೇಕು ಎಂದರೆ ಮೊದಲು ಕುಟುಂಬ ಸರಿಯಾಗಬೇಕು, ಕುಟುಂಬ ಸರಿಯಾದರೆ ಸಮಾಜ ಸರಿಯಾಗುತ್ತದೆ, ದೇಶವೂ ಸರಿಯಾಗುತ್ತದೆ. ಅದಕ್ಕಾಗಿಯೇ ಹಿಂದೂ ಸಮಾಜೋತ್ಸವ ಸಮಿತಿ ಬಡಾವಣೆಗಳಲ್ಲಿ ಮಕ್ಕಳಿಂದ ಹಿರಿಯರವರೆಗೆ ಜಾಗೃತಿ ಉಂಟು ಮಾಡುವಂತಹ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.
ಅವರು ಯಾವುದೇ ಜಾತಿ, ಯಾವುದೇ ಧಾರ್ಮಿಕ ಆ ಚರಣೆ ಅನುಸರಿಸುತ್ತಿರಬಹುದು. ಆದರೆ ಸಂಘಟಿತರಾಗಿ ನಾವೆಲ್ಲಾ ಭಾರತೀಯರಾಗಿ ಒಂದು ಎನ್ನುವ ಭಾವನೆಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ. ಹಿಂದೂಗಳಲ್ಲೇ ಹಲವಾರು ಆ ಚರಣೆಗಳಿಗೆ ನಂಬಿಕೆಗಳು, ಶ್ರದ್ಧಾ ಕೇಂದ್ರಗಳು, ಆಚರಣೆಗಳು ಬೇರೆಬೇರೆ ಇವೆ. ಆದರೆ ಅವರೆಲ್ಲರೂ ಭಾರತೀಯರಾಗಿ ಭಾವೈಕ್ಯತೆಯಿಂದ ಬದುಕಬೇಕು ಎಂಬುದು ಮುಖ್ಯವಾಗಿದೆ. ಸಾಮಾಜಿಕ, ಪರಿಸರ ಕಳಕಳಿ, ನಾಗರೀಕ ಪ್ರಜ್ಞೆ, ಕಾನೂನು ಪಾಲನೆಯಂ ತಹ ಶಿಷ್ಟಾಚಾರವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಕಾನೂನು ಮುರಿಯುವಂತ ಹವರು ಇಂದು ಜಾಸ್ತಿಯಾಗುತ್ತಿದ್ದಾರೆ, ಪಾಲನೆ ಮಾಡು ವವರು ಕಡಿಮೆಯಾಗುತ್ತಿದ್ದಾರೆ. ಕಾನೂನನ್ನು ರೂಪಿಸುವುದು ದೊಡ್ಡದಲ್ಲ, ಪಾಲಿಸುವುದು ಅತ್ಯಂತ ಮುಖ್ಯವಾದದ್ದು, ಆ ಹಿನ್ನೆಲೆಯಲ್ಲಿ ಜಾಗೃತಿ ಉಂಟುಮಾಡಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು, ಎಲ್ಲರೂ ಶಾಂತಿ, ನೆಮ್ಮದಿ ಯಿಂದ ಇರಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಲಿಂಗಸ್ವಾಮೀಜಿ ಹೇಳಿದರು.
ಸಮಿತಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ಹಿಂದೂಗಳು ಒಗ್ಗೂಡಿದಾಗ ದೇಶಕ್ಕೆ ಭವಿಷ್ಯವಿದೆ. ಸಮಾಜದಲ್ಲಿ ಒಗ್ಗಟ್ಟು ಇದ್ದರೆ ದೇಶ ಸದೃಢವಾಗಿ, ಸುಭದ್ರವಾಗಿರುತ್ತದೆ. ಸಮಾಜ, ದೇಶ ನಿರ್ಮಾಣದ ಚಿಂತನೆ, ಹಿಂದೂ ಸಾಂಸ್ಕೃತಿಕ ಮೌಲ್ಯಗಳ ಜಾಗೃತಿಗಾಗಿ ಈ ತಿಂಗಳ ೧೮ರಿಂದ ನಗರದ ಎಲ್ಲಾ ವಸತಿ ಬಡಾವಣೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೂ ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಮಿತಿ ಕಾರ್ಯದರ್ಶಿ ಜಿ.ಎಸ್.ಅನಂತರಾಮು ಮಾತನಾಡಿ, ಹಿಂದೂ ಸಮಾಜೋತ್ಸವದ ಪ್ರಯುಕ್ತ ಬಡಾವಣೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕೃತಿ, ಪರಂಪರೆ, ದೇಶದ ಇತಿಹಾಸವನ್ನು ಬಿಂಬಿಸುವ ನಿಟ್ಟಿನಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮ, ಶೋಭಾ ಯಾತ್ರೆ, ಸಾಂ ಸ್ಕೃತಿಕ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಸ್ವದೇಶಿ ಜೀವನ ಶೈಲಿಯ ಮೂಲಕ ಆ ಚಾರ, ವಿಚಾರ, ನಡೆನುಡಿಗಳಲ್ಲಿ ನಮ್ಮ ಸತ್ವವನ್ನು ಬಡಿದೆಬ್ಬಿಸುವ ಮೂಲಕ ದೇಶದ ಆರ್ಥಿಕತೆಗೆ ಇಂಬು ನೀಡುವ ಸ್ವದೇಶಿ ಜೀವನ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ದೇಶದ ಶ್ರದ್ಧಾ ಕೇಂದ್ರಗಳ ರಕ್ಷಣೆಗೆ ಪಣ ತೊಡಬೇಕಾಗಿದೆ. ಸ್ವಾಭಿಮಾನಿ ಮತ್ತು ಸಶಕ್ತ ರಾಷ್ಟç ನಿರ್ಮಾಣವು ಆದ್ಯ ಕರ್ತವ್ಯವಾಗಬೇಕಿದೆ. ಈ ಎಲ್ಲಾ ಉದ್ದೇಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಿಂದೂ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಜಾಗೃತಿ ಉಂಟು ಮಾಡಲು ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.





