
ತುಮಕೂರು: ರೈತರು, ವ್ಯಾಪಾರಸ್ಥರು ಮತ್ತು ಉದ್ಯಮಿಗಳ ಅಭ್ಯುದಯದ ಉದ್ದೇಶದಿಂದ ಜ. 9, 10ಮತ್ತು 11 ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾಂಡ್ ಮತ್ತು ಗಾಯಿತ್ರಿ ವೃಕ್ಷ ಸಭಾಂಗಣದಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಎಫ್ ಸಿ ತುಮಕೂರು ಅಧ್ಯಕ್ಷ ಮಂಜುನಾಥ್ ಹೆಚ್. ಎಸ್. ತಿಳಿಸಿದ್ದಾರೆ.
ನಗರದಲ್ಲಿ ಸಮಾವೇಶ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು ೫೦ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ತುಮಕೂರಿನಿಂದಲೂ ೫೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಮೊದಲ ದಿನ ಸುಮಾರು ೫ ಸಾವಿರ ಜನ, ಎರಡನೇ ದಿನ ೨೫ ಸಾವಿರ ಹಾಗೂ ಮೂರನೇ ದಿನ ೩೦ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಭಾಗವಹಿಸಿಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಸಂಸದ ಬಿ.ಎನ್. ಬಚ್ಚೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದರು.
ಎಫ್ ಸಿ ತುಮಕೂರು ಜಿಲ್ಲಾ ಉಪಾಧ್ಯಕ್ಷ ಆನಂದ ಕುಮಾರ್ ಮಾತನಾಡಿ, ಫಸ್ಟ್ ಸರ್ಕಲ್ ವತಿಯಿಂದ ಪ್ರತಿವರ್ಷ ಸಮಾವೇಶ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಅದ್ದೂರಿಯಾಗಿ ಆಯೋಜನೆ ಮಾಡಿದ್ದೇವೆ. ಈ ಮೇಳದಲ್ಲಿ ರೈತರಿಗೆ ವ್ಯಾಪಾರ ವಹಿವಾಟು ಮಾಡಲು ಅನುಕೂಲವಾಗುವ ಮಾಹಿತಿ ಸಿಗುತ್ತದೆ. ಇನ್ನು ವ್ಯಾಪಾಸ್ಥರ ವಸ್ತುಗಳ ಮತ್ತು ಅವರ ಸೌಲಭ್ಯಗಳ ಕುರಿತು ಮಾಹಿತಿ ವಿನಿಮಯವಾಗುತ್ತದೆ. ಈಗಾಗಲೇ ನಡೆದಿರುವ ಕಾರ್ಯಕ್ರಮದ ಮೂಲಕ ಕೋಟ್ಯಾಂತರ ರೂ. ವ್ಯವಹಾರ ನಡೆದಿದ್ದು, ಬಹುತೇಕ ಹೆಚ್ಚಿನದಾಗಿ ರೈತ ವರ್ಗಕ್ಕೆ ಅನುಕೂಲಕರವಾಗಿದೆ ಎಂದು ಹೇಳಿದರು.
ಎಫ್. ಸಿ. ರಾಜ್ಯ ಸಂಯೋಜಕ ಛಾಯ ಕುಮಾರ ಮಾತನಾಡಿ, ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಅವರು ಹಾಕಿಕೊಟ್ಟ ಅಡಿಪಾಯದಡಿ, ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದೊಂದು ಅಧ್ಬುತ ಕಾರ್ಯಕ್ರಮ. ಈ ಕಾರ್ಯಕ್ರಮದಿಂದ ಸಮುದಾಯದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ ಎಂದು ಮಾಹಿತಿ ಹಂಚಿಕೊ0ಡರು.
ಈ ವೇಳೆ ಮುಖಂಡರಾದ ಡಾ. ವಿಜಯಕುಮಾರ್, ಕಲ್ಲಳ್ಳಿ ದೇವರಾಜು, ನರಗನಹಳ್ಳಿ ವಿಜಯ್ ಕುಮಾರ್, ಅಭಿಷೇಕ್ ಗೌಡ, ರಾಮ್ ಜೈ ಬಾಬಣ್ಣ ಸೇರಿದಂತೆ ಹಲವರಿದ್ದರು.





