
ತುಮಕೂರು: ದೇವರಾಜ ಅರಸು ಅವರು ಒಬ್ಬ ಮುತ್ಸದ್ದಿ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದಾರೆ, ಆದರೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದರಲ್ಲಿ ಸಾಧನೆ ಮಾಡಿದ್ದಾರೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡರು ಟೀಕಿಸಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಾಡು ಕಂಡ ಶ್ರೇಷ್ಠ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತದ ದಿನಗಳ ದಾಖಲೆ ಮುರಿದಿದ್ದಾರೆ. ಸಿದ್ದರಾಮಯ್ಯ ಅವರು ಅರಸು ಅವರು ಅಧಿಕಾರದಲ್ಲಿ ಇದ್ದ ೨,೭೮೯ ದಿನಗಳಿಗಿಂತ ಒಂದು ದಿನ ಹೆಚ್ಚಿಗೆ ಅಂದರೆ ೨,೭೯೦ ದಿನ ಅಧಿಕಾರದಲ್ಲಿ ಇದ್ದಾರೆ. ನೀವು ಅಧಿಕಾರದಲ್ಲಿ ಎಷ್ಟು ದಿನ ಇದ್ದಿರಿ ಎನ್ನುವುದು ಮುಖ್ಯವಲ್ಲ. ಇದ್ದ ದಿನಗಳಲ್ಲಿ ಜನರಿಗಾಗಿ ಏನು ಮಾಡಿದಿರಿ ಎಂದು ಪ್ರಶ್ನಿಸಿದರು.
ಇತಿಹಾಸದ ಪುಟಗಳಲ್ಲಿ ಅರಸು ಅವರು ಅಜರಾಮರವಾಗಿ ಉಳಿದಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಕಾರಣಕ್ಕಾಗಿ ಇತಿಹಾಸದಲ್ಲಿ ಉಳಿಯಬೇಕು ಎಂದು ಇತಿಹಾಸವೇ ಕೇಳುತ್ತಿದೆ. ಪಕ್ಷದ ಅಧ್ಯಕ್ಷನಾಗಿ ದುಡಿದು ಅದನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವುದು ನೈತಿಕ ಅಧಿಕಾರ. ಅದು ಕೂಲಿ ಮಾಡಿ ಸಂಬಳ ಕೇಳಿದಂತೆ. ಸಿದ್ದರಾಮಯ್ಯನವರು ಎರಡು ಸಾರಿ ಮುಖ್ಯಮಂತ್ರಿಯಾದರು. ಮೊದಲನೆಯ ಸಾರಿ ೨೦೧೩ ರಲ್ಲಿ ಈ ಹುದ್ದೆಗೆ ನ್ಯಾಯವಾಗಿ ಬರಬೇಕಿದ್ದ, ಆಗ ಪಕ್ಷದ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರನ್ನು ಕೊರಟಗೆರೆಯಲ್ಲಿ ಸೋಲಿಸಿ ಅವರು ಅಧಿಕಾರಕ್ಕೆ ಬರುವುದನ್ನೇ ತಪ್ಪಿಸಿದರು. ಕೊನೆಯ ವರೆಗೂ ಅವರನ್ನು ಕನಿಷ್ಠ ಉಪಮುಖ್ಯಮಂತ್ರಿಯೂ ಮಾಡಲಿಲ್ಲ.ಎರಡನೇ ಸಾರಿ (೨೦೨೩) ಪಕ್ಷದ ಅಧ್ಯಕ್ಷರಾಗಿ ಇದ್ದವರು ಡಿ.ಕೆ. ಶಿವಕುಮಾರ್. ಅವರು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದರೆ ಸಿದ್ದರಾಮಯ್ಯ ತಾವು ಬಂದು ಮುಖ್ಯಮಂತ್ರಿಯಲ್ಲಿ ಖುರ್ಚಿಯಲ್ಲಿ ಕುಳಿತುಕೊಂಡರು. ಇದು ಯಾವ ನೈತಿಕ ರಾಜಕಾರಣ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದರು.
ಅರಸು ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಜವಾಗಿ ಶ್ರಮಿಸಿದವರು. ಅದಕ್ಕಾಗಿ ಅವರು ತಮ್ಮ ಜಾತಿಯವರಲ್ಲದ ಎಲ್.ಜಿ. ಹಾವನೂರು ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿ ಅವರು ಕೊಟ್ಟ ವರದಿಯನ್ನು ಬಲಿಷ್ಠ ಸಮುದಾಯಗಳ ವಿರೋಧದ ನಡುವೆಯೂ ಜಾರಿಗೊಳಿಸಿದರು. ಮುಂದೆ ಇದು ಯಾರಿಗೂ ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದು ಅರಸು ಅವರು ಹಿಂದುಳಿದ ವರ್ಗಗಳ ಜನರ ಜೀವನದ ದೊಡ್ಡ ಆಶಾಕಿರಣ ಎನಿಸಿದ್ದಾರೆ ಎಂದರು.
ಅರಸು ಅವರ ಬದ್ಧತೆ ಎಲ್ಲಿ? ಸಿದ್ದರಾಮಯ್ಯನವರ ಆಷಾಢ ಭೂತಿತನ ಎಲ್ಲಿ? ಎತ್ತಣ ಮಾಮರ! ಎತ್ತಣ ಕೋಗಿಲೆ? ಅರಸು ಅವರದು ನಿಸ್ವಾರ್ಥ ರಾಜಕಾರಣ. ಸಿದ್ದರಾಮಯ್ಯನವರದು ಪರಮ ಸ್ವಾರ್ಥದ ರಾಜಕಾರಣ. ಅವರು ಯಾವಾಗಲೂ ರಾಜಕಾರಣ ಇರುವುದು ಸಿದ್ದರಾಮಯ್ಯನವರಿಗಾಗಿ, ಸಿದ್ದರಾಮ ಯ್ಯನವರದು ಮತ್ತು ಸಿದ್ದರಾಮಯ್ಯನವರಿಂದ ಎಂದು ತಿಳಿಯು ತ್ತಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆ. ರಾಜಕಾರಣ ಹೀಗೆ ವ್ಯಕ್ತಿ ಕೇಂದ್ರಿತ ಆಗಿರಬಾರದು. ಅದು ಜನ ಕೇಂದ್ರಿತ ಆಗಿರ ಬೇಕು. ಅರಸು ಅವರು ಮಾಡಿದ್ದು ಜನಕೇಂದ್ರಿತ ರಾಜಕಾರಣ. ಅದಕ್ಕಾಗಿಯೇ ಅವರು ಭೂ ಸುಧಾರಣೆ ತಂದರು. ಅಲ್ಲಿಯೂ ಅವರು ಬಲಿಷ್ಠ ವರ್ಗಗಳನ್ನು ಎದುರು ಹಾಕಿಕೊಂಡು ಅವರ ಜಮೀನು ವಶಪಡಿಸಿಕೊಂಡು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಅನೇಕ ಬಡವರು, ದಲಿತರು, ಕೂಲಿಕಾರರು ಭೂಮಿಯ ಒಡೆಯರು ಆಗುವಂತೆ ಮಾಡಿದರು. ಸಿದ್ದರಾಮಯ್ಯನವರು ಅದೇ ಬಡವರ ನಿವೇಶನಗಳನ್ನು ತಮ್ಮ ಹೆಂಡತಿಯ ಹೆಸರಿಗೆ ಬರೆಸಿಕೊಂಡರು. ಅರಸು ಅವರು ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿವಾರಿಸಿ ಆ ಕೆಲಸ ಮಾಡುತ್ತಿದ್ದ ಭಂಗಿ ಕುಟುಂಬಗಳಿಗೆ ಘನತೆ ತಂದುಕೊಟ್ಟರು ಎಂದು ಸುರೇಶ್‌ಗೌಡ ಹೇಳಿದರು.





