ತುಮಕೂರು: ಕೊಲಂಬೋದಲ್ಲಿ ನಡೆದ ಅಂಧ ಮಹಿಳೆಯರ ಟಿ-೨೦ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿ ಟಿ.ಸಿ.ದೀಪಿಕಾ ಹಾಗೂ ಅವರ ತಂಡವನ್ನು ಜನವರಿ 11 ರಂದು ತುಮಕೂರಿನಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ತಿಳಿಸಿದರು.
ತುಮಕೂರಿನಲ್ಲಿ ರಾಜ್ಯ ಕಾಡುಗೊಲ್ಲರ ಸಂಘ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶಿರಾ ತಾಲ್ಲೂಕಿನ ಗಡಿ ಭಾಗದ ಒಂದು ಕುಗ್ರಾಮ ಗೊಲ್ಲರಹಟ್ಟಿಯ ಬಡ ಕುಟುಂಬದ ಆಟಗಾರ್ತಿ ವಿಶ್ವಕಪ್ ವಿಜೇತೆಯಾಗಿ ಇಡೀ ಭಾರತಕ್ಕೆ ಹೆಮ್ಮೆಯ ಸ್ಥಾನ ತಂದುಕೊಟ್ಟಿದ್ದಾರೆ. ತುಮಕೂರು ಜಿಲ್ಲೆಗೆ ಮಾತ್ರವಲ್ಲದೆ, ಕರ್ನಾಟಕಕ್ಕೆ ಇದು ಹೆಮ್ಮೆಯ ವಿಷಯ. ಬಡ ಕುಟುಂಬದ ಹೆಣ್ಣು ಮಕ್ಕಳು ಮಾಡಿರುವ ಸಾಧನೆಯನ್ನು ನಾವೆಲ್ಲ ಸ್ಮರಿಸಿಕೊಳ್ಳಬೇಕಿದೆ. ಬಡ ಕುಟುಂಬದ ಗೊಲ್ಲ ಜನಾಂಗದಲ್ಲಿ ಹುಟ್ಟಿ ವಿಶ್ವ ಮಟ್ಟದಲ್ಲಿ ಕೀರ್ತಿಪತಾಕೆ ಹಾರಿಸಿರುವ ಈಕೆ ಮತ್ತು ಇವರ ತಂಡವನ್ನು ತುಮಕೂರಿನ ಬಾಲ ಭವನದಲ್ಲಿ ಭಾನುವಾರದಂದು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಜ.೧೧ರಂದು ಬೆಳಗ್ಗೆ ೧೨.೩೦ಕ್ಕೆ ಜಿಲ್ಲಾ ಬಾಲ ಭವನದಲ್ಲಿ ನಡೆಯುವ ಈ ಸನ್ಮಾನ ಕಾರ್ಯಕ್ರಮ ಹಾಗೂ ರಾಜ್ಯ ಕಾಡು ಗೊಲ್ಲರ ಸಂಘದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರುಗಳಾದ ವಿ.ಸೋಮಣ್ಣ, ಹೆಚ್.ಡಿ.ಕುಮಾರಸ್ವಾಮಿ, ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ಮಾಜಿ ಸಚಿವರು, ಶಾಸಕರಾದ ಕೆ.ಎನ್.ರಾಜಣ್ಣ, ಜಿ.ಬಿ.ಜ್ಯೋತಿಗಣೇಶ್, ಸಿ.ಬಿ.ಸುರೇಶಬಾಬು, ಬಿ.ಸುರೇಶ್ ಗೌಡ, ವೆಂಕಟೇಶ್, ಎಂ.ಟಿ.ಕೃಷ್ಣಪ್ಪ, ಕೆ.ಷಡಕ್ಷರಿ, ಟಿ.ಬಿ.ಜಯಚಂದ್ರ, ಎಸ್.ಆರ್.ಶ್ರೀನಿವಾಸ್, ಆರ್.ರಾಜೇಂದ್ರ, ಚಿದಾನಂದಗೌಡ, ರಮೇಶಬಾಬು, ಅರಸೀಕೆರೆ ಶಿವಲಿಂಗೇಗೌಡ, ಸಮುದಾಯದ ಮುಖಂಡರಾದ ನಾಗರಾಜ ಯಾದವ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಸಮುದಾಯದ ಮುಖಂಡರುಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ವಿವರಿಸಿದರು.
ಶಿರಾ ತಾಲ್ಲೂಕಿನ ಕರಿತಿಮ್ಮನಹಳ್ಳಿಯಲ್ಲಿ ಜನಿಸಿದ ದೀಪಿಕಾ ಅವರ ಕುಟುಂಬ ಕೂಲಿ ನಾಲಿ ಮಾಡಿ ಆಕೆಯನ್ನು ಓದಿಸಿದ್ದಾರೆ. ಕಷ್ಟಪಟ್ಟು ಓದಿ ಈ ಹಂತಕ್ಕೆ ಬೆಳೆದಿರುವುದು ಕಾಡುಗೊಲ್ಲ ಸಮುದಾಯಕ್ಕೆ ಒಂದು ಹೆಮ್ಮೆಯ ವಿಷಯ. ಈ ಸಮುದಾಯದ ಜನ ಬಡತನದಲ್ಲಿ ಬದುಕುತ್ತಿದ್ದು, ಶ್ರೀಮಂತರಾಗಿರುವವರು ತುಂಬಾ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿಯೂ ಅಂತರಾಷ್ಟಿçಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ದೇಶಕ್ಕೆ ಗೌರವ ತಂದುಕೊಟ್ಟಿರುವ ತಂಡದ ಮುಖ್ಯಸ್ಥೆ ದೀಪಿಕ ಹಾಗೂ ಇತರರನ್ನು ಸನ್ಮಾನಿಸಲಾಗುತ್ತಿದೆ. ತುಮಕೂರು ತಾಲ್ಲೂಕಿನ ಕಾವ್ಯ, ಶಿವಮೊಗ್ಗದ ಕಾವ್ಯ ಅವರುಗಳು ಸಹ ಅಂದು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ಸಾಧಕರನ್ನು ಸನ್ಮಾನಿಸಿ, ಗೌರವಿಸುವುದು ಒಂದು ಹೆಮ್ಮೆಯ ಸಂಗತಿ ಎಂದರು.
ಪೂರ್ವಭಾವಿ ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಡಿ. ಪ್ರಭುದೇವ್, ದೊಡ್ಡೇಗೌಡ, ಎಸ್.ಡಿ.ಬಸವರಾಜು, ತಿಪ್ಪಯ್ಯ, ಗಂಗಾಧರ್, ಚಿಕ್ಕಣ್ಣ, ರೇಣುಕಯ್ಯ, ರಾಮಣ್ಣ ಮುಂತಾದವರಿದ್ದರು.

(Visited 1 times, 1 visits today)