
ತುಮಕೂರು: ಭಾರತ ಸರ್ಕಾರ ಮತ್ತು ಭೂತಾನ್ ಸರ್ಕಾರ ಸಹಭಾಗಿತ್ವದ ಇಂಡಿಯಾ-ಭೂತಾನ್ ಫೌಂಡೇಶನ್ ಪ್ರಾಯೋಜಿತ ಸಂಶೋಧನ ಯೋಜನೆಯನ್ನು ನಗರದ ಯಕ್ಷದೀವಿಗೆ ಸಂಸ್ಥೆಯು ಯಶಸ್ವಿಯಾಗಿ ಪೂರೈಸಿದೆ. ಯೋಜನೆಯ ಅಂಗವಾಗಿ ಎರಡು ವಾರ ಭೂತಾನ್ ದೇಶ ದಲ್ಲಿ ಪ್ರವಾಸ ಮಾಡಿ ‘ಕರ್ನಾಟಕದ ಯಕ್ಷಗಾನ ಮತ್ತು ಭೂತಾನ್‌ನ ಮಾಸ್ಕ್ ಡ್ಯಾನ್ಸ್: ಒಂದು ತೌಲನಿಕ ಸಾಂಸ್ಕೃತಿಕ ಅಧ್ಯಯನ’ ಎಂಬ ಯೋಜ ನೆಯನ್ನು ಅನುಷ್ಠಾನಗೊಳಿಸಿದೆ.
ಯಕ್ಷಗಾನ ಹಾಗೂ ಮುಖವಾಡ ನೃತ್ಯದ ನಡುವಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ಪ್ರಾಯೋಗಿಕ ಅಧ್ಯಯನಕ್ಕೆ ಒಳಪಡಿಸಿದ ಯಕ್ಷದೀವಿಗೆಯು ಈ ಕುರಿತ ವಿಸ್ತೃತ ವರದಿಯನ್ನು ಸಲ್ಲಿಸಲಿದೆ. ಯಕ್ಷದೀವಿಗೆಯ ಪ್ರತಿನಿಧಿಗಳಾಗಿ ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಡಾ. ಆರತಿ ಪಟ್ರಮೆ, ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಸಹಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಹಾಗೂ ಎಸ್.ಎಸ್.ಪುರಂ ಮಾರುತಿ ವಿದ್ಯಾಕೇಂದ್ರದ ವಿದ್ಯಾರ್ಥಿ ಸಂವೃತ ಎಸ್.ಪಿ. ಸಂಶೋಧನ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.
“ಭೂತಾನ್‌ನ ಸಂಸ್ಕೃತಿ ಇಲಾಖೆ, ರಾಜಧಾನಿ ಥಿಂಪುವಿನಲ್ಲಿರುವ ಸಾಂಪ್ರದಾಯಿಕ ಪ್ರದರ್ಶನ ಕಲೆ ಹಾಗೂ ಸಂಗೀತ ವಿಭಾಗ, ರಾಷ್ಟಿçÃಯ ಗ್ರಂಥಾಲಯ ಮತ್ತು ಪತ್ರಾಗಾರ ವಿಭಾಗ, ಭೂತಾನ್ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಲ್ಯಾಂಗ್ವೇಜ್ ಅಂಡ್ ಕಲ್ಚರ್ ಇನ್ನಿತರ ಸಂಸ್ಥೆಗಳು ಈ ಯೋಜನೆಗೆ ತಮ್ಮ ಸಹಭಾಗಿತ್ವವನ್ನು ಒದಗಿಸಿವೆ. ಯಕ್ಷಗಾನವನ್ನು ಅಲ್ಲಿನ ಕಲಾವಿದರಿಗೆ ಪರಿಚಯಿಸುವ ಹಾಗೂ ಭೂತಾನ್‌ನ ರಾಷ್ಟಿçÃಯ ಕಲೆ ಮಾಸ್ಕ್ ಡ್ಯಾನ್ಸ್ ಅನ್ನು ಅರ್ಥಮಾಡಿಕೊಳ್ಳುವ ತರಬೇತಿ ಕಾರ್ಯಾಗಾರಗಳನ್ನು ಪ್ರವಾಸದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು” ಎಂದು ಯಕ್ಷದೀವಿಗೆ ಅಧ್ಯಕ್ಷೆ ಡಾ. ಆರತಿ ಪಟ್ರಮೆ ತಿಳಿಸಿದ್ದಾರೆ.
ಭೂತಾನ್ ರಾಷ್ಟಿçÃಯ ಗ್ರಂಥಾಲಯದ ನಿರ್ದೇಶಕ ಡಾ. ಯಾಂಟೆನ್ ಡಾರ್ಗೆ, ಸಾಂಪ್ರದಾಯಿಕ ಪ್ರದರ್ಶನ ಕಲೆ ಹಾಗೂ ಸಂಗೀತ ವಿಭಾಗದ ಮುಖ್ಯಸ್ಥ ಉಗ್ಯೆನ್ ತೇನ್ಜಿನ್, ಕಾಲೇಜ್ ಆಫ್ ಲ್ಯಾಂಗ್ವೇಜ್ ಅಂಡ್ ಕಲ್ಚರ್ ಉಪನ್ಯಾಸಕ ಪೆಮಾ ವಾಂಗ್ಚುಕ್ ಹಾಗೂ ಮುಖವಾಡ ನೃತ್ಯ ಕಲಾವಿದರೊಂದಿಗೆ ಸಂದರ್ಶನ ನಡೆಸಿ ಮಾಹಿತಿಗಳನ್ನು ಕಲೆ ಹಾಕಲಾಗಿದೆ.
ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆ, ಅಭಿನಯ, ಮಾತುಗಾರಿಕೆ ಹಾಗೂ ರಂಗಚಲನೆಗಳನ್ನು ಕಾರ್ಯಾಗಾರದ ಮೂಲಕ ಭೂತಾನ್ ಕಲಾವಿದರಿಗೆ ಕಲಿಸಿಕೊಡಲಾಯಿತು. ಹಾಗೆಯೇ ಮಾಸ್ಕ್ ಡ್ಯಾನ್ಸ್ನ ರಚನೆ, ವಿನ್ಯಾಸ, ವಸ್ತು ಹಾಗೂ ರಂಗಚಲನೆಗಳನ್ನು ಅಭ್ಯಾಸ ಮಾಡಲಾಯಿತು. ಭೂತಾನ್ ದೇಶದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಬದುಕಿನಲ್ಲಿ ಮುಖವಾಡ ನೃತ್ಯದ ಪಾತ್ರ ಮತ್ತು ಪ್ರಭಾವಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಯಿತು. ಸಾಂಸ್ಕೃತಿಕ ನಗರಿ ಪಾರೊ, ಪ್ರಾಚೀನ ರಾಜಧಾನಿ ಪುನಾಖ ಹಾಗೂ ಪ್ರಸಕ್ತ ರಾಜಧಾನಿ ಥಿಂಪುವಿನಲ್ಲಿರುವ ವಿವಿಧ ಬೌದ್ಧಮಂದಿರಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳಿ ಭೇಟಿ ನೀಡಿ ಅಧ್ಯಯನ ನಡೆಸಲಾಯಿತು.
ಭೂತಾನ್ ದೇಶದ ಪ್ರಗತಿಯನ್ನು ಸಂತೋಷ ಸೂಚ್ಯಂಕದ ಆಧಾರದಲ್ಲಿ ಮಾಪನ ಮಾಡಲಾಗುತ್ತದೆ ಎಂಬುದು ಗಮನಾರ್ಹ ವಿಷಯ. ಎರಡೂ ದೇಶಗಳ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಬ0ಧಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಅಧ್ಯಯನ ಪ್ರವಾಸವು ಭವಿಷ್ಯದಲ್ಲಿ ಹೆಚ್ಚಿನ ಪಾತ್ರ ವಹಿಸಲಿದೆ ಎಂದು ಡಾ. ಆರತಿ ಪಟ್ರಮೆ ತಿಳಿಸಿದ್ದಾರೆ.



