
ಹುಳಿಯಾರು: ಇಲ್ಲಿನ ಗಾಂಧಿ ಪೇಟೆಯ ನಿವಾಸಿ ರೋಷನ್ ಬಿನ್ ಶ್ರೀರಂಗಬಾಬು ಎಂಬುವರ ಮನೆಯಲ್ಲಿ ಬುಧವಾರ ನಸುಕಿನ ವೇಳೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ದೇವರ ದರ್ಶನಕ್ಕಾಗಿ ಮುಂಜಾನೆ ನನಗೆ ಬೀಗ ಹಾಕಿ ನಂಜನಗೂಡಿಗೆ ತೆರಳಿದ್ದ ಸಮಯದಲ್ಲಿ ಕಳ್ಳರು ಬೀಗ ಮುರಿದು ಒಳನುಗ್ಗಿ ಕೃತ್ಯ ಎಸಗಿದ್ದಾರೆ.
ಘಟನೆಯ ವಿವರ: ಮನೆಯ ಮಾಲೀಕ ರೋಷನ್ ಮತ್ತು ಅವರ ಪತ್ನಿ ಬುಧವಾರ ಬೆಳಗಿನ ಜಾವ ಸುಮಾರು ೨:೩೦ಕ್ಕೆ ನಂಜನಗೂಡಿನ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳಿದ್ದರು. ದಂಪತಿಗಳು ಹೋದ ನಂತರ ಅಂದರೆ ಸುಮಾರು ೨:೩೦ ರಿಂದ ೩:೩೦ರ ಅವಧಿಯಲ್ಲಿ ಈ ಕಳ್ಳತನ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಮಧ್ಯಾಹ್ನ ೨:೩೦ರ ಸುಮಾರಿಗೆ ಪಕ್ಕದ ಮನೆಯವರು ವಾಹನ ನಿಲ್ಲಿಸಲು ಬಂದಾಗ ಮನೆ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ರೋಷನ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಮುಂಭಾಗದ ಗೇಟ್ ಮತ್ತು ಮುಂಬಾಗಿಲಿನ ಬೀಗ ಹಾಕಿರುವುದನ್ನು ಗಮನಿಸಿರುವ ಕಳ್ಳರು, ಮನೆಯಲ್ಲಿ ಯಾರೂ ಇಲ್ಲ ಎಂದು ಬಗೆದು ಕಾಂಪೌ0ಡ್ ಹತ್ತಿ ಒಳಕ್ಕೆ ಬಂದಿದ್ದಾರೆ. ಬೀಗ ಹಾಕುವ ಕೊಂಡಿಯನ್ನು ಮುರಿದು ಒಳಹೊಕ್ಕಿರುವ ಕಳ್ಳರು ಮುಂಬಾಗಿಲ ಬಳಿ ಹಾಕಿದ್ದ ಬಲ್ಬ್ ಅನ್ನು ತೆಗೆದು ಕತ್ತಲೆಯಲ್ಲಿ ತಮ್ಮ ಕೆಲಸ ಮುಗಿಸಿದ್ದಾರೆ. ಅಕ್ಕಪಕ್ಕದವರಿಗೂ ಯಾವುದೇ ಅನುಮಾನ ಬಾರದಂತೆ ಬಹಳ ಚಾಕಚಕ್ಯತೆಯಿಂದ ಕಳ್ಳತನ ಎಸಗಿದ್ದಾರೆ.
ಪೊಲೀಸ್ ಭೇಟಿ: ವಿಷಯ ತಿಳಿದ ತಕ್ಷಣ ತಿಪಟೂರು ಡಿವೈಎಸ್ಪಿ ಉಮೇಶ್, ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕ ಜನಾರ್ಧನ್, ಮತ್ತು ಹುಳಿಯಾರು ಪಿಎಸ್‌ಐ ಸಾಗರ್ ಹಸ್ಕಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿದ ನಂತರವಷ್ಟೇ ಮನೆಯೊಳಗೆ ಹೋದಾಗ ಎಷ್ಟು ಮೌಲ್ಯದ ಚಿನ್ನಾಭರಣ ಅಥವಾ ನಗದು ಕಳ್ಳತನವಾಗಿದೆ ಎಂಬ ನಿಖರ ಮಾಹಿತಿ ದೊರೆಯಲಿದೆ.
ಸಾರ್ವಜನಿಕರ ಆಗ್ರಹ : ಹುಳಿಯಾರು ಭಾಗದಲ್ಲಿ ಇತ್ತೀಚೆಗೆ ಬೈಕ್ ಕಳ್ಳರು, ತೋಟದ ಕೇಬಲ್ ಕಳ್ಳರು ಮತ್ತು ಮನೆಗಳ್ಳರ ಹಾವಳಿ ಮಿತಿಮೀರಿದೆ. ಇದರಿಂದ ಸಾರ್ವಜನಿಕರು ಆತಂಕಗೊ0ಡಿದ್ದಾರೆ.ಪೊಲೀಸರು ರಾತ್ರಿ ವೇಳೆಯಲ್ಲಿ ಗಸ್ತನ್ನು ಹೆಚ್ಚಿಸಬೇಕು. ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





