ಚಿಕ್ಕನಾಯಕನಹಳ್ಳಿ: ತಾಲೂಕಿನ ಹುಳಿಯಾರ ನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರು ಸೋಮವಾರ ಮುಂಜಾನೆ ಕೇರಳದ ಕೊಚ್ಚಿನ್‌ನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ತೆರಳಲು ಸಾಂಪ್ರದಾಯಿಕವಾಗಿ ಮಾಲಾಧಾರಣೆ ಮಾಡಿದರು. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಕೈಗೊಂಡಿರುವ ಮೊದಲ ಪವಿತ್ರ ಯಾತ್ರೆ ಇದಾಗಿದೆ.
ಕೊಚ್ಚಿಯಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ, ತುಮಕೂರು ಜಿಲ್ಲೆಯ ಹುಳಿಯಾರಿನ ಪ್ರಸಿದ್ಧ ಗುರುಸ್ವಾಮಿಗಳಾದ ಎಸ್.ಆರ್.ಎಸ್. ದಯಾನಂದ್ ಸ್ವಾಮಿ ಅವರು ಕುಮಾರಸ್ವಾಮಿ ಅವರಿಗೆ ಮಾಲಾಧಾರಣೆ ಮಾಡಿಸಿದರು.
ಇರುಮುಡಿ ಹೊತ್ತು ಪ್ರಯಾಣ: ಮಾಲಾ ಧಾರಣೆಯ ನಂತರ ದೇಗುಲದ ಆವರಣದಲ್ಲೇ ಗುರುಸ್ವಾಮಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ‘ಇರುಮುಡಿ’ ಕಟ್ಟನ್ನು ಸಿದ್ಧಪಡಿಸಲಾಯಿತು. ತದನಂತರ ಸಚಿವರು ಇರುಮುಡಿಯನ್ನು ತಲೆಯ ಮೇಲೆ ಹೊತ್ತುಕೊಂಡು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆಯೊಂದಿಗೆ ಶಬರಿಮಲೆಯತ್ತ ಪ್ರಯಾಣ ಬೆಳೆಸಿದರು. ಸನ್ನಿಧಾನ ತಲುಪಿದ ಬಳಿಕ ಪಂಪಾ ನದಿಯಲ್ಲಿ ಪುಣ್ಯಸ್ನಾನ ಮುಗಿಸಿ, ಸಂಜೆ ನಡೆಯಲಿರುವ ಪ್ರಸಿದ್ಧ ‘ಪಡಿ ಪೂಜೆ’ ಹಾಗೂ ‘ಪುಷ್ಪಾಭಿಷೇಕ’ ಸೇವೆಗಳಲ್ಲಿ ಅವರು ಭಾಗಿಯಾಗಲಿದ್ದಾರೆ.
ಸಚಿವರೊಂದಿಗೆ ರಾಜಕೀಯ ಗಣ್ಯರ ದಂಡು: ಕುಮಾರಣ್ಣ ಅವರ ಈ ಪವಿತ್ರ ಯಾತ್ರೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಪ್ರಮುಖ ಜನಪ್ರತಿನಿಧಿಗಳು ಹಾಗೂ ನಾಯಕರು ಸಾಥ್ ನೀಡಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವರಾದ ಸಿ. ಎಸ್. ಪುಟ್ಟರಾಜು, ಸಾ. ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹಾಗೂ ಶಾಸಕ ಶರಣಗೌಡ ಕಂದಕೂರ್ ಸೇರಿದಂತೆ ಹಲವು ಗಣ್ಯರು ಮಾಲೆ ಧರಿಸಿ ಜೊತೆಯಾಗಿದ್ದಾರೆ.
ಒಟ್ಟಿಗೆ ಸಾಗಿದ ಸ್ಥಳೀಯ ಭಕ್ತರ ಬಳಗ: ವಿಶೇಷವೆಂದರೆ, ಸಚಿವರ ಈ ಯಾತ್ರಾ ತಂಡದಲ್ಲಿ ಹುಳಿಯಾರು, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ಭಾಗದ ಪ್ರಮುಖ ಮುಖಂಡರು, ಪಟ್ಟಣ ಪಂಚಾಯಿತಿ ಕೌನ್ಸಿಲರ್‌ಗಳು ಮತ್ತು ೩೦ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ತಂಡ ಜೊತೆಯಾಗಿ ಸಾಗುತ್ತಿರುವುದು ಈ ಬಾರಿಯ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ.

(Visited 1 times, 1 visits today)